ಬೆಂಗಳೂರು: ಮುಂಬೈನಲ್ಲಿರುವ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ನಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಅವರಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಮುಂಬೈನಲ್ಲಿರುವ 10 ಶಾಸಕರು ಅರ್ಜಿಯನ್ನು ಸಲ್ಲಿಸಿದ್ದಾರೆ. ಶನಿವಾರ ನಾವು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಬೇಕೆಂದು 10 ಶಾಸಕರು ಮನವಿ ಮಾಡಿದ್ದಾರೆ.
Advertisement
Advertisement
ಈ ಸಂಬಂಧ ನ್ಯಾಯಾಲಯ ಅರ್ಜಿಯ ತುರ್ತು ವಿಚಾರಣೆಗೆ ಗುರುವಾರ ಸಮಯ ನೀಡಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಲಿದ್ದಾರೆ. ಮುಖ್ಯ. ನ್ಯಾ.ರಂಜನ್ ಗೋಗೊಯ್ ಅವರಿದ್ದ ಪೀಠ ಅರ್ಜಿಯನ್ನು ವಿಚಾರಣೆಯನ್ನು ನಡೆಸಲಿದೆ.
Advertisement
ದೂರಿನಲ್ಲಿ ಏನಿದೆ?
ಜುಲೈ 6ರಂದು ಎಲ್ಲ 10 ಶಾಸಕರು ರಾಜೀನಾಮೆ ಸಲ್ಲಿಸಲು ವಿಧಾನಸೌಧಕ್ಕೆ ಆಗಮಿಸುತ್ತಿರುವ ವಿಷಯ ತಿಳಿದು ಸ್ಪೀಕರ್ ಕಚೇರಿಯಿಂದ ಹೊರ ನಡೆದಿದ್ದಾರೆ. ಹೀಗಾಗಿ ಸ್ಪೀಕರ್ ಕಚೇರಿಯ ಕಾರ್ಯದರ್ಶಿಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದೇವೆ. ಅಲ್ಲಿಂದ ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆಯನ್ನು ಸಲ್ಲಿಸಲಾಗಿದೆ. ಪಕ್ಷೇತರ ಶಾಸಕರಿಬ್ಬರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ. ಸ್ಪೀಕರ್ ಉದ್ದೇಶಪೂರ್ವಕವಾಗಿಯೇ ಜುಲೈ 9ರವರೆಗೆ ಬೇಕೆಂತಲೇ ಕಚೇರಿಗೆ ಬಂದಿಲ್ಲ. ಈಗಾಗಲೇ ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದು ಬಿಜೆಪಿಗೆ ಬೆಂಬಲವನ್ನು ನೀಡಿದ್ದಾರೆ.
Advertisement
ಜುಲೈ 9ರಂದು ಕಚೇರಿಗೆ ಆಗಮಿಸಿದ ಸ್ಪೀಕರ್, ಎಂಟು ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ, ಐವರ ಶಾಸಕರ ಪತ್ರಗಳು ಕ್ರಮಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಜುಲೈ 12ರಂದು ವಿಚಾರಣೆಗೆ ಹಾಜರಾಗಬೇಕೆಂದು ಐವರಲ್ಲಿ ಮೂವರಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕರು ರಾಜೀನಾಮೆ ಸಲ್ಲಿಸಿರುವ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ವೀಕರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. 10 ಶಾಸಕರು ತಮ್ಮ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ರೆ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸ್ವೀಕರ್ ಅವರಿಗೆ ಸಲ್ಲಿಸಿರುವ ಅರ್ಜಿಯನ್ನು ರದ್ದುಗೊಳಿಸಬೇಕು.
ಜುಲೈ 12ರಂದು ಅಧಿವೇಶನ ಆರಂಭಗೊಳ್ಳಲಿದ್ದು, ಅಂದೇ ಸ್ಪೀಕರ್ ರಾಜೀನಾಮೆ ಕ್ರಮಬದ್ಧವಾಗಿರುವ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸ್ಪೀಕರ್ ನಡೆ ಯಾರದ್ದೊ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಬಹುಮತವಿಲ್ಲದ ಸರ್ಕಾರ ಶಾಸಕರನ್ನು ಅನರ್ಹಗೊಸುವಂತೆ ಬೆದರಿಕೆಯನ್ನು ಹಾಕಿದೆ. ಶಾಸಕರಾದ ನಾವು ಯಾವುದೇ ಭಯ, ಒತ್ತಡ, ಪ್ರಲೋಭನೆಗೆ ಬಲಿಯಾಗದೇ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ.
ನಮ್ಮ ರಾಜೀನಾಮೆ ಅಂಗೀಕಾರವಾಗದೇ ಇರೋದು ಸಂವಿಧಾನದ 14ನೇ ಪರಿಚ್ಚೇದದ ಸ್ಪಷ್ಟ ಉಲ್ಲಂಘನೆ ಆಗಿದೆ. ನಾವು ಕರ್ನಾಟಕ ವಿಧಾನಸಭಾ ನಿಯಮಾವಳಿ ರೂಲ್ ನಂಬರ್ 202 ಪ್ರಕಾರ ರಾಜೀನಾಮೆ ಪತ್ರ ಸಲ್ಲಿಸಿದೇವೆ. ಆರ್ಟಿಕಲ್ 190 ರ ಪ್ರಕಾರ ರಾಜೀನಾಮೆ ಪತ್ರದಲ್ಲಿ ಕೇವಲ ಸಹಿ ಇದ್ರೆ ಸಾಕು ಜೊತೆಗೆ ಸ್ಪೀಕರ್ ಗೆ ತೃಪ್ತಿ ಆದ್ರೆ ಸಾಕು. ರಾಜೀನಾಮೆ ಪತ್ರ ಹೀಗೆ ಇರಬೇಕು ಎಂಬ ಕಾನೂನು ಇಲ್ಲ. ನಾವು ಸ್ಪೀಕರ್ ಕಚೇರಿಗೆ ಹೋಗಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ, ಅದನ್ನು ಸ್ಪೀಕರ್ ಕೂಡಾ ನೋಡಿದ್ದಾರೆ.
ಸ್ಪೀಕರ್ ಕಾನೂನು ಪ್ರಕಾರ ನಡೆದುಕೊಳ್ಳುತ್ತಿಲ್ಲ ಮತ್ತು ಪಕ್ಷಪಾತ ನೀತಿ ಅನುಸರಿಸುತ್ತಿದ್ದಾರೆ. ಈಗ ಮೈತ್ರಿ ಸರ್ಕಾರ ಅಧಿಕೃತವಾಗಿ ಬಹುಮತ ಕಳೆದುಕೊಂಡಿದೆ. ಹೀಗಿದ್ದರೂ ರಮೇಶ್ ಕುಮಾರ್ ತಾವು ಸದನದ ಸ್ಪೀಕರ್ ಅಂತಾ ಅಂದುಕೊಂಡಿದ್ದಾರೆ. ಬಹುಮತ ಕಳೆದುಕೊಂಡ ಸರ್ಕಾರದಲ್ಲಿ ಸ್ಪೀಕರ್ ಮತ್ತು ಸಿಎಂ ಪವರ್ ಲೇಸ್ ಇದ್ದಂಗೆ. ಹಾಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಿ, ಸಂವಿಧಾನ ಉಳಿಸಬೇಕು. ನಮ್ಮ ಅರ್ಜಿಯನ್ನ ಮಾನ್ಯ ಮಾಡಬೇಕು. ಸ್ಪೀಕರ್ ನಮ್ಮ ರಾಜೀನಾಮೆಯನ್ನ ಅಂಗೀಕರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು.