ಶಿವಮೊಗ್ಗ: ಲೋಕಸಭಾ ಕ್ಷೇತ್ರಕ್ಕೆ ಐದು ತಿಂಗಳ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 52 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ರಾಘವೇಂದ್ರ ಒಟ್ಟು 5,421,306 ಪಡೆದರೆ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದ ಜೆಡಿಎಸ್ ನ ಮಧು ಬಂಗಾರಪ್ಪ 4,91,158 ಮತಗಳನ್ನು ಪಡೆದಿದ್ದಾರೆ.
ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಸ್ತಿತ್ವವನ್ನು ಏರುಪೇರು ಮಾಡುವ ಶಕ್ತಿ ಇದ್ದ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು.
Advertisement
Advertisement
ಮೈತ್ರಿ ಅಭ್ಯರ್ಥಿ ಮಧು ಪರವಾಗಿ ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲೇ ಮೂರು ದಿನ ವಾಸ್ತವ್ಯ ಮಾಡಿದ್ದರು. ಇವರೊಂದಿಗೆ ಮೈತ್ರಿ ಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಇನ್ನಿತರ ಘಟಾನುಘಟಿ ನಾಯಕರು ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ್ದರು. ಆದರೆ, ಈ ಎಲ್ಲಾ ಪ್ರಯತ್ನಗಳ ನಂತರವೂ ಮಧು ಬಂಗಾರಪ್ಪ ಸೋತಿದ್ದಾರೆ.
Advertisement
ಮಧು ಸೋಲಿಗೆ ಕಾರಣಗಳೇನು?
ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಬಾಯಿಬಾಯಿ ಆಗಿದ್ದಾರೆ. ಆದರೆ, ಸ್ಥಳೀಯವಾಗಿ ಎರಡೂ ಪಕ್ಷಗಳ ನಡುವಿನ ಅಂತರ ಇನ್ನೂ ಹಾಗೇ ಉಳಿದಿದೆ. ಮುಖ್ಯವಾಗಿ ಮಧು ಬಂಗಾರಪ್ಪ ಅವರ ಪರವಾಗಿ ಜಿಲ್ಲೆಯ ಕೆಲವೇ ಕೆಲವು ಕಾಂಗ್ರೆಸ್ ನಾಯಕರು ಮಾತ್ರ ಪ್ರಚಾರ ನಡೆಸಿದರು. ಉಳಿದ ಬಹಳಷ್ಟು ನಾಯಕರು ಸಭೆ- ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಳ್ಳಲು, ಬೆಂಗಳೂರಿಂದ ಬಂದ ನಾಯಕರು ಹಿಂದೆ ಸುತ್ತಾಡಲು ಮಾತ್ರ ಸೀಮಿತ ಆದರು.
Advertisement
ಶಿವಮೊಗ್ಗ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ದೇಶಪಾಂಡೆ ಜಿಲ್ಲೆಗೆ ಬಂದ ಪುಟ್ಟ- ಹೋದ ಪುಟ್ಟ ಎಂಬಂತಾದರು. ಇಲ್ಲೇ ಇದ್ದು, ಸ್ಥಳೀಯ ಕಾಂಗ್ರೆಸ್- ಜೆಡಿಎಸ್ ನಾಯಕರನ್ನು ಒಗ್ಗೂಡಿಸಿ ಕೆಲಸ ಮಾಡಿಸುವಲ್ಲಿ ಸಂಪೂರ್ಣ ವಿಫಲರಾದರು. ಮುಖ್ಯವಾಗಿ ಮತದಾನದ ಪ್ರಮಾಣದ ಕುಸಿತವೂ, ಪ್ರಚಾರಕ್ಕೆ ಸಿಕ್ಕ ಅಲ್ಪ ಅವಧಿ ಲಭ್ಯವಾಗಿದ್ದು ಮಧು ಸೋಲಿಗೆ ಇನ್ನೊಂದು ಕಾರಣವಾಗಿದೆ.
ರಾಘವೇಂದ್ರ ಗೆಲ್ಲಲು ಕಾರಣಗಳೇನು?
ಮುಖ್ಯವಾಗಿ ಬಿಜೆಪಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಮತದಾರರ ಸಂಪರ್ಕ ಜಾಲ ರಾಘವೇಂದ್ರ ಗೆಲುವಿಗೆ ಸಹಕಾರಿ. ಇದರೊಂದಿಗೆ ಯಡಿಯೂರಪ್ಪ ಸ್ವತಃ ಪ್ರಚಾರಕ್ಕೆ ಇಳಿದ್ದು, ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ಪರವಾಗಿ ಸ್ವತಃ ಅವರ ತಂದೆ, ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚಾರ ನಡೆಸಿದ್ದರು. ಶಿವಮೊಗ್ಗದಲ್ಲಿ ಎಷ್ಟೋ ವರ್ಷಗಳ ನಂತರ ಸ್ವತಃ ಯಡಿಯೂರಪ್ಪ ಹಳ್ಳಿಹಳ್ಳಿಗಳಿಗೆ ಹೋಗಿ ಮಗನ ಪರ ಪ್ರಚಾರ ಮಾಡಿದ್ದರು. ಮೋದಿ ಕೈ ಬಲಪಡಿಸಿ, ಮೈತ್ರಿ ಕೂಟಕ್ಕೆ ಬುದ್ಧಿ ಕಲಿಸಿ ಎಂದು ಕರೆ ನೀಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರಾವತಿ ಹೊರತು ಪಡಿಸಿ ಉಳಿದ ಎಲ್ಲಾ ಕಡೆ ಬಿಜೆಪಿ ಶಾಸಕರು ರಾಘವೇಂದ್ರ ಪರ ಪ್ರಚಾರ ನಡೆಸಿದ್ದರು. ಇವು ರಾಘವೇಂದ್ರ ಗೆಲುವಿಗೆ ಪೂರಕ ಅಂಶಗಳು.
ಗೆದ್ದರೂ ಕಳೆ ಕಳೆದುಕೊಂಡರೆ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಮೂರುವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಇದೇ ಗುಂಗಿನಲ್ಲಿದ್ದ ಬಿಜೆಪಿ ನಾಯಕರು ಅಷ್ಟೇ ಪ್ರಮಾಣದ ಅಂತರದಲ್ಲಿ ಈ ಬಾರಿಯೂ ಗೆಲ್ಲುತ್ತೇವೆ ಎಂದು ಬೀಗಿದ್ದರು. ಆದರೆ, ಗೆಲುವಿನ ಅಂತರ 50 ಸಾವಿರಕ್ಕೆ ಇಳಿದಿರುವುದು ಬಿಜೆಪಿ ನಾಯಕರನ್ನು ಕದಡಿಸಿದೆ.
ಒಟ್ಟಿನಲ್ಲಿ ಐದು ತಿಂಗಳ ಸಂಸದರಾಗಿ ಆಯ್ಕೆ ಆಗಿರುವ ರಾಘವೇಂದ್ರ ಒಂದೇ ಒಂದು ಬಾರಿ ಮಾತ್ರ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯ. ಅದೂ ಬರಲಿರುವ ಚುನಾವಣಾ ಮುನ್ನ ನಡೆಯಲಿರುವ ಅಧಿವೇಶನ. ಈ ಒಂದು ಅಧಿವೇಶನದಲ್ಲಿ ರಾಘವೇಂದ್ರ ಎಷ್ಟರ ಮಟ್ಟಿಗೆ ಮಲೆನಾಡಿನ ಜನರ ಸಮಸ್ಯೆಗೆ ಧ್ವನಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv