ಮುಂಬೈ: ವಿದೇಶಿ ಕ್ರಿಕೆಟ್ ಟೂರ್ನಿಗಳಿಗೆ ಆಟಗಾರರೊಂದಿಗೆ ಪತ್ನಿಯರು ಆಗಮಿಸಲು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದ ವಿರಾಟ್ ಕೊಹ್ಲಿ ಮಾತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಮ್ಮತಿ ಸೂಚಿಸಿದ್ದು ಹಳೆಯ ಸುದ್ದಿ. ಆದರೆ ಈಗ ಮುಂದಿನ ವಿಶ್ವಕಪ್ ವೇಳೆ ತಮಗೆ ಬಾಳೆಹಣ್ಣು ಬೇಕೆಂದು ಟೀಂ ಇಂಡಿಯಾ ಆಟಗಾರರು ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ 2019ರ ಟೂರ್ನಿ ಮೇ 30 ರಿಂದ ಜುಲೈ 15ರವರೆಗೂ ಇಂಗ್ಲೆಂಡ್‍ನಲ್ಲಿ ನಡೆಯಲಿದೆ. ಟೀಂ ಇಂಡಿಯಾ ಆಟಗಾರರು ಟೂರ್ನಿಯ ವೇಳೆ ಬಾಳೆಹಣ್ಣಿಗಾಗಿ ಬೇಡಿಕೆ ಇಟ್ಟಿರುವ ಹಿಂದೆ ಪ್ರಮುಖ ಕಾರಣವಿದೆ. ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಭಾರತೀಯ ಆಟಗಾರರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ವಿಫಲವಾಗಿತ್ತು. ಇದು ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಉಂಟುಮಾಡಿತ್ತು. ಅಲ್ಲದೇ ಹಲವು ಆಟಗಾರರು ಟೂರ್ನಿಯ ವೇಳೆ ದೈಹಿಕ ಸಾಮಥ್ರ್ಯವನ್ನು ಕಾಯ್ದುಕೊಳ್ಳಲು ಸಮಸ್ಯೆ ಎದುರಿಸಿದ್ದರು. ಅದ್ದರಿಂದ ಈ ಬಾರಿ ಆಟಗಾರರು ಬಾಳೆಹಣ್ಣುಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಈ ಕುರಿತು ಟೀಂ ಇಂಡಿಯಾ ಆಡಳಿತ ಮಂಡಳಿಯ ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಆಟಗಾರರ ಬೇಡಿಕೆಗೆ ಇದೂವರೆಗೂ ಬಿಸಿಸಿಐ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದೊಮ್ಮೆ ಟೂರ್ನಿಯ ಆಯೋಜಕರು ಉತ್ತಮ ಆಹಾರದ ವ್ಯವಸ್ಥೆ ಮಾಡದಿದ್ದರೆ ಬಿಸಿಸಿಐ ತನ್ನ ಹಣದಿಂದಲೇ ಆಟಗಾರರಿಗೆ ಬಾಳೆಹಣ್ಣಿನ ವ್ಯವಸ್ಥೆ ಮಾಡುವ ನಿರೀಕ್ಷೆ ಇದೆ.
ಉಳಿದಂತೆ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಟೂರ್ನಿಯ ವೇಳೆ ಅಲ್ಲಿ ಪ್ರಯಾಣ ನಡೆಸಲು ಬಸ್ ಬದಲಾಗಿ ರೈಲಿನಲ್ಲೇ ಪ್ರಯಾಣದ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ. ಇದರ ಹಿಂದೆಯೂ ಕಾರಣವಿದ್ದು, ಬಸ್ ಪ್ರಯಾಣದ ವೇಳೆ ಆಟಗಾರರ ಪತ್ನಿ ಹಾಗೂ ಗೆಳತಿಯರಿಗೆ ಬಸ್ಸಿನಲ್ಲಿ ಬರಲು ಅವಕಾಶವಿಲ್ಲ. ಅದ್ದರಿಂದ ಆಟಗಾರರು ಈ ಬೇಡಿಕೆ ಮುಂದಿಟ್ಟಿದ್ದಾರೆ. ರೈಲಿನಲ್ಲಿ ವ್ಯವಸ್ಥೆ ಮಾಡಿದರೆ ಭದ್ರತೆಯ ಸಮಸ್ಯೆ ಆಗಲಿರುವ ಕಾರಣ ಈ ಬೇಡಿಕೆಗೆ ಸ್ಪಂದಿಸುವುದು ಕಷ್ಟ ಎನ್ನಲಾಗಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿದೇಶಿ ಟೂರ್ನಿಗಳ ವೇಳೆ ಟೀಂ ಇಂಡಿಯಾ ಆಟಗಾರರೊಂದಿಗೆ ಅವರ ಪತ್ನಿಯರು ಆಗಮಿಸಲು ಬಿಸಿಸಿಐ ಅನುಮತಿ ನೀಡಿತ್ತು. ಆದರೆ ಟೂರ್ನಿಯ ಆರಂಭದ 10 ದಿನಗಳ ಬಳಿಕ ಪತ್ನಿಯರಿಗೆ ಆಗಮಿಸಲು ನಿಯಮವನ್ನು ವಿಧಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv