ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆಂದು ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಹೇಳಿದ್ದಾರೆ.
ಪಾಕ್ ಪ್ರಧಾನಿಯಾಗಿ 100 ದಿನ ಪೂರೈಸಿರುವ ಇಮ್ರಾನ್ ಖಾನ್, ಗುರುವಾರ ಭಾರತೀಯ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸೇನೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲ. ಕೇವಲ ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬಹುದೆಂದು ಹೇಳಿದ್ದಾರೆ.
ಸಮಸ್ಯೆಯನ್ನು ಬಗೆಹರಿಸಲು ಅಸಾಧ್ಯವೆಂದು ಹೇಳಲಾಗುವುದಿಲ್ಲ. ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ. ಅಲ್ಲದೇ ಪಾಕಿಸ್ತಾನ ತನ್ನ ಪ್ರದೇಶವನ್ನು ಉಗ್ರರು ಬಳಸಿಕೊಳ್ಳಲು ಬಿಡುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಪಾಕ್ ವಿದೇಶಾಂಗ ಸಚಿವಾಲಾಯ ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿತ್ತು. ಆದರೆ ಈ ಆಹ್ವಾನವನ್ನು ಭಾರತ ಖಡಾಖಂಡಿತವಾಗಿ ತಿರಸ್ಕರಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಶಾಂತಿ ಮಾತುಕತೆ ಹಾಗೂ ಭಯೋತ್ಪಾದನೆ ಒಟ್ಟಾಗಿ ಸಾಗಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ಪಾಕ್ ಬಿಡುವವರೆಗೂ ಮಾತುಕತೆ ಅಸಾಧ್ಯ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಯುವ ಸಾರ್ಕ್ ಸಭೆಯಲ್ಲಿ ಭಾರತ ಭಾಗಿಯಾಗುವುದಿಲ್ಲ. ಅಲ್ಲದೇ ಪಾಕ್ ಆಹ್ವಾನವನ್ನು ಪ್ರಧಾನಿ ಮೋದಿಯವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲವೆಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv