ಚಿಕ್ಕಮಗಳೂರು: ಹೊಸ ವರ್ಷವನ್ನ ಕಾಫಿನಾಡು ಚಿಕ್ಕಮಗಳೂರಲ್ಲಿ ಸ್ವಾಗತಿಸೋಣ ಅಂತ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ಹೋಟೆಲ್‍ನ ಬುಕ್ ಮಾಡಿದರೆ ಓಕೆ. ಹೋಗಿ ನೋಡೋಣ, ಮಾಡೋಣ, ಹುಡುಕೋಣ ಅನ್ನೋರಿದ್ದರೆ ಬರಲೇಬೇಡಿ. ಯಾಕೆಂದರೆ ಕಾಫಿನಾಡಿನ ಶೇಕಡ 99ರಷ್ಟು ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳು ಬುಕ್ಕಾಗಿವೆ. ಅದು ಒಂದೂವರೆ ಎರಡು ತಿಂಗಳ ಹಿಂದೆಯೇ ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಪ್ರವಾಸಿಗರೂ ಚಿಕ್ಕಮಗಳೂರಲ್ಲಿ ಜಮಾಯಿಸಿದ್ದು, ಕಾಫಿನಾಡಲ್ಲೀಗ ಪ್ರವಾಸಿಗರ ಜಾತ್ರೆ ನಡೆಯುತ್ತಿದೆ.
ಶನಿವಾರ, ಭಾನುವಾರ ವೀಕೆಂಡ್, ಮಂಗಳವಾರ ಹೊಸ ವರ್ಷ, ಸೋಮವಾರ ಅದಕ್ಕಾಗಿ ಸಿದ್ಧತೆ. ಪ್ರಕೃತಿಯ ಸೂರಿನಡಿ ಕಾಫಿನಾಡ ಸೌಂದರ್ಯ ಸವಿಯುತ್ತ ಹೊಸ ವರ್ಷಕ್ಕೆ ವೆಲ್‍ಕಂ ಹೇಳುವುದಕ್ಕೆ ಲಕ್ಷಾಂತರ ಪ್ರವಾಸಿಗರು ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷದ ಮಹಾಮಳೆಗೆ ಕೇರಳ-ಕೊಡಗು ಕೊಚ್ಚಿ ಹೋದ ಪರಿಣಾಮ ಕಾಫಿನಾಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಸೀತಾಳಯ್ಯನಗಿರಿ, ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿದಂತೆ ಪ್ರಮುಖ ಗಿರಿಶಿಖರಗಳಲ್ಲಿ ಪ್ರವಾಸಿಗರು ಸೋಮವಾರ ರಾತ್ರಿಗಾಗಿ ಹಾತೊರೆಯುತ್ತಿದ್ದಾರೆ.
Advertisement
Advertisement
ಪ್ರವಾಸಿಗರು ಅಪರೂಪದ ಪ್ರಕೃತಿ ಸೌಂದರ್ಯ ಕಂಡು ಮಲೆನಾಡ ಮಡಿಲಲ್ಲಿ ಮೈಮರೆಯುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಹಾದು ಹೋಗುವ ಮೋಡಗಳ ಕಣ್ಣಾಮುಚ್ಚಾಲೆ ಕಂಡು ಪುಳಕಿತರಾಗುತ್ತಿದ್ದು, ಶನಿವಾರ-ಭಾನುವಾರ ಶಾರದಾಂಭೆ ಹಾಗೂ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಡಿಸೆಂಬರ್ 31ರ ರಾತ್ರಿಯನ್ನ ಎದುರು ನೋಡುತ್ತಿದ್ದಾರೆ. ಆದರೆ ಪ್ರವಾಸಿಗರ ಮೋಜು-ಮಸ್ತಿಯಿಂದ ಪ್ಲಾಸ್ಟಿಕ್, ಬಾಟಲಿಗಳು ಪ್ರಕೃತಿಯಲ್ಲಿ ಸೇರಿ ಇಲ್ಲಿನ ಸೌಂದರ್ಯ ಹಾಳಾಗುತ್ತಿದೆ ಎಂದು ಹೋಂ ಸ್ಟೇ ಮಾಲೀಕ ಗಿರೀಶ್ ಹೇಳಿದ್ದಾರೆ.
Advertisement
ಕಾಂಕ್ರಿಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ಧ ಮಾಲಿನ್ಯದಿಂದ ಕಳೆದು ಹೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಕಾಫಿನಾಡು ವಿಶಿಷ್ಟ ಅನುಭವ ನೀಡುತ್ತಿದೆ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯ ವಿಸ್ಮಯ ಕಂಡು ಪ್ರವಾಸಿಗರು ಮೈಮರೆಯುತ್ತಿದ್ದಾರೆ. ಆದರೆ ಪ್ರವಾಸಿಗರ ದಂಡನ್ನ ಕಂಡ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ದುಬಾರಿ ಹಣ ಕೇಳುತ್ತಿದ್ದಾರೆ. ಈ ಮಟ್ಟದ ಪ್ರವಾಸಿಗರು ಬಂದಿದ್ದರಿಂದ ವಾಹನಗಳನ್ನ ಕಂಟ್ರೋಲ್ ಮಾಡುವುದಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜಿಲ್ಲೆಯ ಬಹುತೇಕ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳು ಭರ್ತಿಯಾಗಿದ್ದು, ಬುಕ್ಕಿಂಗ್ ಕ್ಯಾನ್ಸಲ್ ಆದರಷ್ಟೆ ರೂಂ ಸಿಗುವದು ಎಂಬಂತಾಗಿದೆ. ಇನ್ನು ಹೋಂ ಸ್ಟೆ, ರೆಸಾರ್ಟ್ ಮಾಲೀಕರು ಕೂಡ ಬಗೆಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆಯನ್ನ ಈಡೇರಿಸೋದಕ್ಕೆ ಸನ್ನದ್ಧರಾಗಿದ್ದಾರೆ ಎಂದು ಹೋಂ ಸ್ಟೇ ಮಾಲೀಕ ಗುರುದತ್ ತಿಳಿಸಿದ್ದಾರೆ.
Advertisement
ಹೊಸ ವರ್ಷ ವಾರದ ಆರಂಭದ ದಿನದಲ್ಲಿ ಬಂದಿರುವುದು ಪ್ರವಾಸಿಗರಿಗೆ ಹಾಗೂ ಯುವಜನತೆಗೆ ಡಬಲ್ ಧಮಾಕ ಬಂದಂತಾಗಿದೆ. ವೀಕೆಂಡ್‍ನಲ್ಲಿ ಪ್ರಕೃತಿ ಹಾಗೂ ದೈವದ ದರ್ಶನ ಪಡೆದು ಡಿಸೆಂಬರ್ 31ರ ರಾತ್ರಿ ಕಾಯುತ್ತಿದ್ದಾರೆ. ಈ ಸುಮಧುರ ಘಳಿಗೆ ಲಕ್ಷಾಂತರ ಜನಕ್ಕೆ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಿದೆ. ಇನ್ನೂ ನಾಲ್ಕು ದಿನ ಕಾಫಿನಾಡು ಪ್ರವಾಸಿಗರ ನಾಡಾಗಿರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv