Connect with us

Cinema

ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ಓದಿ

Published

on

ಕೋಲಾರ: ದೇಶಾದ್ಯಂತ ಈಗ ಕೆಜಿಎಫ್ ಹೆಸರು ಕೇಳಿದರೆ ಜನರು ರೋಮಾಂಚನಗೊಳ್ಳುತ್ತಿದ್ದಾರೆ. ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ದೇಶದ ಕೀರ್ತಿ. ಅಂದು ಇದೆ ಜಾಗ ದೇಶವನ್ನು ಉಳಿಸಿದರೆ, ಇಂದು ಹವಾ ಎಬ್ಬಿಸಿ ಮತ್ತೊಂದು ಇತಿಹಾಸಕ್ಕೆ ನಾಂದಿಯಾಗುತ್ತಿದೆ.

ಕೆಜಿಎಫ್ ಸಿನಿಮಾಕ್ಕಾಗಿ ಇಡೀ ದೇಶ ಹಾಗೂ ವಿಶ್ವಾದ್ಯಂತ ಜನರು ಕುತೂಹಲ ಹಿಡಿದಿಟ್ಟುಕೊಂಡು ಕಾಯುತ್ತಿದ್ದಾರೆ. ಈ ಸಿನಿಮಾದ ಕಥೆ ಏನೇ ಇದ್ರು ಕೆಜಿಎಫ್ ಎನ್ನುವ ಪ್ರದೇಶ ಚಿನ್ನವನ್ನು ಬೆಳೆಯುತ್ತಿದ್ದ ಮಣ್ಣು, ಶತ ಶತಮಾನಗಳ ಇತಿಹಾಸದ ಕಥೆ ಹೇಳುವ ಈ ಪ್ರದೇಶ ಇರೋದು ಕೋಲಾರ ಜಿಲ್ಲೆಯ ಚಿನ್ನದ ನಾಡು ಕೆಜಿಎಫ್ ನಲ್ಲಿ. ಇಂದು ಸಿನಿಮಾ ರೋಚಕ ಕಥೆಯನ್ನಡಗಿಸಿಟ್ಟುಕೊಂಡು ಕುತೂಹಲ ಮೂಡಿಸಿದ್ರೆ, ಈ ಕೆಜಿಎಫ್ ಪ್ರದೇಶವೂ ಅದಕ್ಕಿಂತ ರೋಚಕ ಕಥೆ ಹೊಂದಿದೆ.

ಬರೋಬ್ಬರಿ 150 ವರ್ಷಗಳ ಕಾಲ ಈ ನೆಲದಲ್ಲಿ ಚಿನ್ನವನ್ನು ಬಗೆದು ಇಡೀ ವಿಶ್ವಕ್ಕೆ ಕೊಟ್ಟಂತ ಕೀರ್ತಿ ಈ ನೆಲಕ್ಕಿದೆ. ಆದರೆ ಕಳೆದ 2001ರ ಮಾರ್ಚ್-1ರಂದು ಈ ಅದ್ಭುತವಾದ ಸುವರ್ಣ ಇತಿಹಾಸ ಹೊಂದಿದ್ದ ಕೆಜಿಎಫ್ ಚಿನ್ನದ ಗಣಿ ನಷ್ಟದ ನೆಪವೊಡ್ಡಿ ಬೀಗ ಹಾಕಲಾಯಿತು. ಇದನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಜನ ಕಾರ್ಮಿಕರು ಬೀದಿ ಪಾಲಾದ್ರು, ಸರ್ಕಾರದಿಂದ ಸಿಗಬೇಕಾದ ಪರಿಹಾರ ಸಿಗದೆ 18 ವರ್ಷಗಳೇ ಕಳೆದ್ರು, ಇಲ್ಲಿನ ಕಾರ್ಮಿಕರು ಮಾತ್ರ ಇಂದಲ್ಲ ನಾಳೆ ನಮ್ಮ ಬದುಕಲ್ಲೂ ಒಳ್ಳೆಯ ದಿನ ಬಂದೇ ಬರುತ್ತದೆ ಅನ್ನೋ ನಿರೀಕ್ಷೆಯ ಕಣ್ಣುಗಳಲ್ಲಿ ಕಾಯುತ್ತಿದ್ದಾರೆ. ಚಿನ್ನದ ಗಣಿಯನ್ನೇ ನಂಬಿ ಬದುಕುತ್ತಿದ್ದ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿ ಹೋಯ್ತು, ಪರಿಣಾಮ ತುತ್ತು ಅನ್ನಕ್ಕಾಗಿ ಕಾರ್ಮಿಕರು ದೂರ ಊರುಗಳಿಗೆ ನಿತ್ಯ ಅಲೆಯುವ ಪರಿಸ್ಥಿತಿ ಬಂದಿದೆ. ಕೆಜಿಎಫ್ ಎನ್ನುವ ಸಿನಿಮಾದ ಜೊತೆಗೆ ಗಣಿ ಪುನಾರಂಭವಾಗುತ್ತಾ ಎನ್ನುವ ನಿರೀಕ್ಷೆ ಕಾರ್ಮಿಕರದ್ದಾಗಿದೆ.

ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಹಾಗೂ ಈ ಸೈನೈಡ್ ಗುಡ್ಡದ ಮೇಲೆ ಕನ್ನಡ, ತೆಲುಗು, ತಮಿಳು ಭಾಷೆಯ ನೂರಾರು ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ಇಲ್ಲಿ ಚಿತ್ರೀಕರಣ ಮಾಡಿರುವ ಯಶಸ್ವಿ ನಟರ ಹತ್ತಾರು ಸಿನಿಮಾಗಳು ಹಿಟ್ ಆಗಿವೆ. ಆದ್ರೆ ಕೆಜಿಎಫ್ ಸಿನಿಮಾ ವಿಶೇಷ ಅಂದ್ರೆ ಇಲ್ಲಿನ ಚಿನ್ನದ ಗಣಿ ಸೈನೈಡ್ ಗುಡ್ಡದ ಮೇಲೆ ಬೃಹತ್ತಾದ ಸೆಟ್ ಹಾಕಿ ಸುಮಾರು ಎರಡು ತಿಂಗಳ ಕಾಲ ಇಲ್ಲೇ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಚಿತ್ರದಲ್ಲೂ ಚಿನ್ನದ ಗಣಿ ಕಾರ್ಮಿಕರ ಕಷ್ಟದ ಬದುಕನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎನ್ನಲಾಗುತ್ತಿದೆ.

ಕೆಜಿಎಫ್ ಚಿತ್ರದ ಮೂಲಕ ಸ್ಥಳೀಯ ಅಂದ್ರೆ 70- 80ರ ದಶಕದ ಪರಿಸ್ಥಿತಿಯನ್ನು ಮನದಟ್ಟು ಮಾಡುವ ಪ್ರಯತ್ನ ನಡೆದಿದೆ. ಇದರ ಮೂಲಕವಾದರೂ ಚಿನ್ನದ ಗಣಿ ಕಾರ್ಮಿಕರ ನಿಜ ಬದುಕು, ಇಲ್ಲಿನ ಜನರ ಗೋಳು ಆಡಳಿತ ವರ್ಗದ ಅಧಿಕಾರಿಗಳ ಮನ ಮುಟ್ಟಲಿ. ಆ ಮೂಲಕ 18 ವರ್ಷಗಳ ಸಂಕಷ್ಟದ ಬಳಿಕ ನಮ್ಮ ಬದುಕು ಸುಧಾರಿಸುತ್ತದಾ ಎನ್ನುವ ನಿರೀಕ್ಷೆಯಲ್ಲಿ ಕಾರ್ಮಿಕರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *