Bengaluru CityDistrictsKarnatakaLatestMain Post

ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

ಬೆಂಗಳೂರು: ಕರ್ನಾಟಕದ ರಿಯಲ್ ಸಿಂಗಂ, ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿ ಅಬ್ಬರಿಸಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದು ಕೊಟ್ಟಿದ್ದ ಯುವ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ.

ಮಧುಕರ್ ಶೆಟ್ಟಿಯವರನ್ನು ನೋಡದವರು ಕೂಡ ಅವರು ಮಾಡಿದ ಕೆಲಸಗಳನ್ನು ಕೇಳಿ ಗೌರವ ನೀಡುತ್ತಾ ಇದ್ದರು. ಅವರ ಹೆಸರಿನ ಮಹತ್ವವೇ ಹಾಗಿತ್ತು. ಆದ್ರೆ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.15ಕ್ಕೆ ಹೈದ್ರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಧುಕರ್ `ದಕ್ಷತೆ’ಯ ಹಾದಿ:
1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಇವರು 2003 ರಿಂದ 2004ರವರೆಗೆ ಚಾಮರಾಜನಗರ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ವಿದ್ಯಾಭ್ಯಾಸದ ರಜೆ ತೆಗೆದುಕೊಂಡ ಬಳಿಕ ತರಬೇತಿ ಮತ್ತು ನೇಮಕಾತಿ ವಿಭಾಗದ ಡಿಐಜಿ ಆಗಿ ಬಡ್ತಿ ಪಡೆದ್ರು. ಹೈದರಾಬಾದ್‍ನ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ದೆಹಲಿಯ ಜೆಎನ್‍ಯುನಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಹಾಗೂ ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.

ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದಾಗ ಮನೆ ಮಾತಾಗಿದ್ದರು. ಲೋಕಾಯುಕ್ತ ಎಸ್ಪಿಯಾಗಿ ನಿಯೋಜನೆಗೊಂಡ ಎರಡೇ ತಿಂಗಳಿಗೆ ಎರಡು ಜಿಲ್ಲೆಯ ಎಸ್ಪಿಗಳನ್ನು ಟ್ರಾಪ್ ಮಾಡಿ ಲಂಚ ಪಡೆಯುವಾಗ ಜೈಲಿಗೆ ಅಟ್ಟಿದ್ರು. ಆದ್ರೆ ಲೋಕಾಯುಕ್ತದಲ್ಲಿ ಆದ ಕೆಲವು ಬೆಳವಣಿಗೆಗಳಿಂದ ಬೇಸತ್ತ ಮಧುಕರ್ ಶೆಟ್ಟಿ, ಅಮೆರಿಕಕ್ಕೆ ತೆರಳಿ ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಕರ್ನಾಟಕಕ್ಕೆ ವಾಪಸ್ಸು ಬಂದಿದ್ದರು.

ಡಿಐಜಿಯಾದ ಮಧುಕರ್ ಶೆಟ್ಟಿಗೆ ಸರ್ಕಾರ ಸರಿಯಾದ ಸ್ಥಾನ ಮಾನ ನೀಡಿರಲಿಲ್ಲ. ಇದರಿಂದ ಬೇಸತ್ತು ಮತ್ತೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸಕ್ಕೆ ತೆರಳಿದ್ದರು. ಕರ್ನಾಟಕದಿಂದ ಕೇಂದ್ರ ಸೇವೆಗೆ ಮರಳಿದ್ದ ಅವರನ್ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು.

ಚಾಮರಾಜನಗರ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದಾಗ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಬಿಸಿ ಮುಟ್ಟಿಸುತ್ತಿದ್ದರು.  ಒಟ್ಟಿನಲ್ಲಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದುಕೊಟ್ಟ ನೇರ ನಡೆ ನುಡಿಯ ನಿಷ್ಠುರ ಅಧಿಕಾರಿಯಾಗಿದ್ದ ಮಧುಕರ್, ಲೋಕಾಯುಕ್ತದಲ್ಲೂ ಭ್ರಷ್ಟಾಚಾರ ಇದೆ ಎಂದು ಹೇಳಿ ಬಿರುಗಾಳಿ ಎಬ್ಬಿಸಿದ್ದ ಸಿಂಗಂ ಆಗಿದ್ದರು. ಇಷ್ಟು ಮಾತ್ರವಲ್ಲದೇ ವೀರಪ್ಪನ್ ಸೆರೆಗಾಗಿ ರಚನೆಗೊಂಡಿದ್ದ ವಿಶೇಷ ಕಾರ್ಯಪಡೆಯಲ್ಲಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ.

ಹಳ್ಳಿಗೆ ಹೆಸರು:
ಉಡುಪಿ ಜಿಲ್ಲೆ ಮೂಲದವರಾದ ಮಧುಕರ್ ಶೆಟ್ಟಿ ಚಿಕ್ಕಮಗಳೂರಿನಿಂದ ವೃತ್ತಿ ಪ್ರಾರಂಭಿಸಿದ್ರು. ಇವರ ಕಾರ್ಯಕ್ಕೆ ಮೂಡಿಗೆರೆಯ ಆಲ್ದೂರಿನ ಜನ ಆ ಊರಿಗೆ ಇಟ್ಟ ಹೆಸರು ಡಿಸಿ ಹಾಗೂ ಎಸ್ಪಿದು. 2006ರಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರೊಡನೆ ಸೇರಿ ಒತ್ತುವರಿಯಾಗಿದ್ದ ಜಮೀನನ್ನು ಬಿಡಿಸಿ ದಲಿತರಿಗೆ ಕೊಟ್ಟಿದ್ದರು. ಹಾಗಾಗಿ ಜನ ಡಿಸಿ ಹರ್ಷ ಗುಪ್ತಾ, ಎಸ್ಪಿ ಮಧುಕರ್ ಶೆಟ್ಟಿ ಹೆಸರನ್ನ ಸೇರಿಸಿ ಆ ಹಳ್ಳಿಗೆ ಗುಪ್ತಶೆಟ್ಟಿ ಹಳ್ಳಿ ಅಂತಾ ಹೆಸರಿಟ್ಟುಕೊಂಡಿದ್ದಾರೆ.

ಪತ್ರಕರ್ತರಾಗಿದ್ದ ಉಡುಪಿ ಜಿಲ್ಲೆಯ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ ಮಧುಕರ್‍ಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಇವರು 1998ರ ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿಯಾಗಿದ್ದರು. ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗೋ ಅವಕಾಶ ಸಿಕ್ಕರೂ ತಾನು ಪೊಲೀಸ್ ಅಧಿಕಾರಿಯೇ ಆಗಬೇಕೆಂದು ಹಠ ಹಿಡಿದು ಖಾಕಿ ಧರಿಸಿ ಆ ಸೇವೆಗಾಗಿಯೇ ತಮ್ಮ ಜೀವನವನ್ನ ಮುಡಿಪಾಗಿಟ್ಟಿದ್ದರು. ಸದ್ಯ ಮಧುಕರ್ ಶೆಟ್ಟಿಗೆ ಒಬ್ಬಳು ಪುತ್ರಿ ಮತ್ತು ಪತ್ನಿಯನ್ನ ಅಗಲಿದ್ದಾರೆ. ಮಧುಕರ್ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button