‘ಹತ್ಯಾಚಾರಿ’ಗಳ ಎನ್‍ಕೌಂಟರ್- ಪೊಲೀಸರಿಗೆ ಸ್ಟಾರ್ಸ್ ಶಬ್ಬಾಶ್

Public TV
2 Min Read
collage 1

ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ. ಇದರಿಂದ ಇಡೀ ದೇಶದ ಜನರು ಪೊಲೀಸರಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್‍ನ ಸ್ಟಾರ್ ನಟರು ಕೂಡ ಪೊಲೀಸರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಟಾಲಿವುಡ್ ನಟ ನಾಗಾರ್ಜುನ, ಜ್ಯೂ. ಎನ್‍ಟಿಆರ್. ನಾನಿ, ಅಲ್ಲು ಅರ್ಜುನ್, ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಇನ್ನೂ ಅನೇಕರು ಟ್ವೀಟ್ ಮಾಡುವ ಮೂಲಕ ಪೊಲೀಸರು ಎನ್‍ಕೌಂಟರನ್ನು ಶ್ಲಾಘಿಸುತ್ತಿದ್ದಾರೆ.

“ಇಂದು ಬೆಳಗ್ಗೆ ಸುದ್ದಿ ನೋಡಿ ಎಚ್ಚರಗೊಂಡಿದ್ದೇನೆ ಹಾಗೂ ಪೊಲೀಸರ ಎನ್‍ಕೌಂಟರ್ ಮೂಲಕ ನ್ಯಾಯ ಸಿಕ್ಕಿದೆ” ಎಂದು ನಾಗಾರ್ಜುನ್ ಬರೆದು ಟ್ವೀಟ್ ಮಾಡಿದರೆ, ಇತ್ತ ನಟ ಎನ್‍ಟಿಆರ್ “ನ್ಯಾಯ ಸಿಕ್ಕಿದೆ. ಈಗ ದಿಶಾ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.

“ಊರಿಗೆ ಒಬ್ಬನೇ ರೌಡಿ ಇರಬೇಕು. ಅದು ಪೊಲೀಸ್ ಆಗಿರಬೇಕು” ಎಂಬ ಸಿನಿಮಾ ಡೈಲಾಗ್ ಹೇಳುವ ಮೂಲಕ ನಟ ನಾನಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

“ಅತ್ಯಾಚಾರದಂತಹ ಅಪರಾಧ ಮಾಡಿದ ನಂತರ ನೀವು ಎಷ್ಟು ದೂರ ಓಡಿ ಹೋಗಬಹುದು” ಎಂದು ಬರೆದು ಎನ್‍ಕೌಂಟರ್ ಮಾಡಿದ ಪೊಲೀಸರಿಗೆ ರಾಕುಲ್ ಸಿಂಗ್ ಧನ್ಯವಾದ ತಿಳಿಸಿದ್ದಾರೆ.

“ಕೊನೆಗೂ ಅವರು ಮಾಡಿದ ಅಮಾನವೀಯ ಅಪರಾಧಕ್ಕೆ ಶಿಕ್ಷೆಯಾಗಿದೆ. ಮತ್ತೆ ಮುಗ್ಧ ದಿಶಾ ಹಿಂದಿರುಗಿ ಬರಲು ಸಾಧ್ಯವಿಲ್ಲ. ಆದರೆ ಮುಂದೆ ಯಾರಾದರೂ ಅತ್ಯಾಚಾರ ಅಥವಾ ಕೊಲೆಯ ಬಗ್ಗೆ ಯೋಚನೆ ಮಾಡಿದಾಗ ಅವರು ಅದರ ಪರಿಣಾಮಗಳ ಬಗ್ಗೆಯೂ ಅರಿತುಕೊಳ್ಳುತ್ತಾರೆ” ಎಂದು ನಟ ನಿಖಿಲ್ ಸಿದ್ಧಾರ್ಥ ಹೇಳಿದ್ದಾರೆ.

“ನ್ಯಾಯ ಸಿಕ್ಕಿದೆ, ನಮ್ಮ ತೆಲಂಗಾಣ ಮುಖ್ಯಮಂತ್ರಿಗೆ ಧನ್ಯವಾದಗಳು. ನಮ್ಮ ಪೊಲೀಸ್ ಶ್ರೀ ಸಜ್ಜನಾರ್ ಅವರಿಗೆ ಹ್ಯಾಟ್ಸಪ್. ದಿಶಾ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಟ ರಾಜಶೇಖರ್ ಬರೆದುಕೊಂಡಿದ್ದಾರೆ. ಜೊತೆಗೆ ಸಿಎಂ ಮತ್ತು ಪೊಲೀಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ಈ ಎನ್ ಕೌಂಟರ್ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *