ಬೆಂಗಳೂರು: ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಐಪಿಎಲ್‌ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಇಂದು ಬೆಂಗಳೂರಿನಲ್ಲಿ ಹಣಾಹಣಿಗೆ ಸಜ್ಜಾಗಿವೆ. ಈ ಹಿನ್ನೆಲೆ ಭದ್ರತಾ ವ್ಯವಸ್ಥೆಗಳನ್ನ ಮತ್ತಷ್ಟು ಹೆಚ್ಚಿಸಲಾಗಿದೆ.
ಎಸ್‌ಆರ್‌ಎಸ್ (SRH) ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಕಂಡುಬಂದ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲು ಹಾಗೂ ಕ್ರಿಕೆಟ್ ಪ್ರಿಯರ ಸುರಕ್ಷತೆ ಇನ್ನಷ್ಟು ಖಚಿತಪಡಿಸಿಕೊಳ್ಳಲು ಈ ಬಾರಿ ಭದ್ರತಾ ವ್ಯವಸ್ಥೆಗಳನ್ನ ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಭದ್ರತೆಯ ಪ್ರಮಾಣ ತುಸು ಹೆಚ್ಚಿದ್ದು, ಸುಮಾರು 2,300 ಪೊಲೀಸರನ್ನ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿಂದು ಹೈವೋಲ್ಟೇಜ್ ಕದನ – ಆರ್‌ಸಿಬಿ ಬಲಿಷ್ಠ ಪಡೆಯನ್ನ ಎದುರಿಸಬಲ್ಲದೇ CSK?

ಭದ್ರತಾ ದೃಷ್ಟಿಯಿಂದ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ಎರಡು ಹೆಚ್ಚುವರಿ ಬ್ಯಾಗೇಜ್ ಕೌಂಟರ್‌ಗಳನ್ನು ನಿರ್ಮಿಸಲಾಗಿದ್ದು, ಪ್ರೇಕ್ಷಕರ ಅನುಕೂಲಕ್ಕೆ ನೆರವಾಗಲಿದೆ. ಕಳೆದ ಬಾರಿ ಪಂದ್ಯದ ವೇಳೆ 70ಕ್ಕೂ ಹೆಚ್ಚು ಮೊಬೈಲ್‌ಗಳು (Mobile) ಕಳ್ಳತನವಾಗಿದ್ದವು. ಈ ಘಟನೆಗಳನ್ನು ಮನಗಂಡು, ಕಳ್ಳರ ಬಗ್ಗೆ ಎಚ್ಚರದಿಂದಿರಲು ಕ್ರಿಕೆಟ್ ಪ್ರಿಯರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಸ್ಟೇಡಿಯಂ ಆವರಣದಲ್ಲಿ ಹೆಚ್ಚು ಸೈನ್ ಬೋರ್ಡ್‌ಗಳನ್ನು ಅಳವಡಿಸುವುದರ ಜೊತೆಗೆ, ಮೈಕ್ ಮೂಲಕವೂ ಪದೇ ಪದೇ ಅನೌನ್ಸ್‌ಮೆಂಟ್‌ಗಳನ್ನು ಮಾಡಿ ಜಾಗೃತಿ ಮೂಡಿಸಲಾಗುವುದು.
ಪಂದ್ಯ ವೀಕ್ಷಣೆಗೆ ಬರುವ ಅಪಾರ ಜನಸಂದಣಿಯನ್ನ ನಿಯಂತ್ರಿಸಲು ವಿಶೇಷ BMTC ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಪ್ರದೇಶಗಳು ಮತ್ತು ಮೆಟ್ರೋ ಸಂಚಾರ ಸಮಯ ಕಳೆದ ಬಾರಿಯಂತೆಯೇ ಇರಲಿದೆ. ಟಿಕೆಟ್ ಇಲ್ಲದವರಿಗೆ ಸ್ಟೇಡಿಯಂ ಬಳಿ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೇ, ನಕಲಿ ಟಿಕೆಟ್ ಮಾರಾಟ ಮತ್ತು ಇತರ ಚಟುವಟಿಕೆಗಳ ಮೇಲೆ ಸಿಸಿಬಿ ನಿರಂತರ ಕಣ್ಗಾವಲು ಇರಿಸಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ RCB vs CSK ಹಣಾಹಣಿ – ಚಿನ್ನಸ್ವಾಮಿ ಪಿಚ್ ರಿಪೋರ್ಟ್ ಹೇಗಿದೆ?

