ಆರ್‌ಸಿಬಿ ‘ರಾಯಲ್‌’ ಆಗಿ ಪ್ಲೇ-ಆಫ್‌ಗೆ; ಚೆನ್ನೈ ಮನೆಗೆ

Public TV
3 Min Read
RCB playoff

ಬೆಂಗಳೂರು: ಪ್ಲೇ-ಆಫ್‌ ಪ್ರವೇಶ ಕಾರಣಕ್ಕೆ ಕೊನೆ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ತಂಡವು ರಾಯಲ್‌ ಆಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ. ಈ ಸಲ ಕಪ್‌ ನಮ್ದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 27 ರನ್‌ಗಳ ಗೆಲುವು ದಾಖಲಿಸಿತು. ಒಂದು ವೇಳೆ ಪಂದ್ಯ ಸೋತು 201 ರನ್‌ ಗಳಿಸಿದ್ದರೂ ಚೆನ್ನೈ ಪ್ಲೇ-ಆಫ್‌ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಆದರೆ ಆರ್‌ಸಿಬಿ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಚೆನ್ನೈ ಪ್ಲೇ-ಆಫ್‌ ಕನಸಿಗೂ ತಣ್ಣೀರು ಬಿದ್ದಿತು. ಕೇವಲ 10 ರನ್‌ಗಳ ಅಂತರದಲ್ಲಿ ಗಾಯಕ್‌ವಾಡ್‌ ಪಡೆ ಪ್ಲೇ-ಆಫ್‌ನಿಂದ ಮುಗ್ಗರಿಸಿತು.

CSK playoff

ಬೆಂಗಳೂರು ತಂಡ ನೀಡಿದ್ದ 219 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಪಂದ್ಯ ಸೋತು ಪ್ಲೇ-ಆಫ್‌ನಿಂದ ಹೊರಬಿದ್ದಿತು. ತವರಿನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಗೆಲುವಿನ ಗಿಫ್ಟ್‌ ನೀಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿತು. ಉತ್ತಮ ಶುಭಾರಂಭ ನೀಡಿದ ಆರ್‌ಸಿಬಿ ಬ್ಯಾಟರ್‌ಗಳು ಚೆನ್ನೈ ಬೌಲರ್‌ಗಳನ್ನು ದಂಡಿಸಿದರು.

3 ಓವರ್‌ಗೆ 31 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲಹೊತ್ತಿನಲ್ಲಿ ಮತ್ತೆ ಪಂದ್ಯ ಪುನಾರಂಭವಾಯಿತು. 6.4 ಓವರ್‌ನಲ್ಲಿ ಕೊಹ್ಲಿ ಮತ್ತು ಡು ಪ್ಲೆಸಿಸ್‌ 50 ರನ್‌ಗಳ ಜೊತೆಯಾಟವಾಡಿದರು. ಹೊಡಿಬಡಿ ಆಟವಾಡುತ್ತಿದ್ದ ಕೊಹ್ಲಿ ಅರ್ಧಶತಕ ವಂಚಿತರಾಗಿ (47 ರನ್‌, 29 ಬಾಲ್‌, 3 ಫೋರ್‌, 4 ಸಿಕ್ಸರ್‌) ಔಟಾದರು.

RCB vs CSK

ಇತ್ತ ಜವಾಬ್ದಾರಿಯುತ ಆಟವಾಡಿದ ಡು ಪ್ಲೆಸಿಸ್‌ ಅರ್ಧಶತಕ (54 ರನ್‌, 39 ಬಾಲ್‌, 3 ಫೋರ್‌, 3 ಸಿಕ್ಸರ್‌) ಬಾರಿಸಿದರು. ಆದರೆ ವಿವಾದಾತ್ಮಕ ರನೌಟ್‌ ತೀರ್ಪಿಗೆ ಔಟ್‌ ಆಗಿ ಪೆವಿಲಿಯನ್‌ ಸೇರಿದರು.

ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿದ ರಜತ್‌ ಪಾಟೀದಾರ್‌ 41 ರನ್‌ ಸಿಡಿಸಿ (23 ಬಾಲ್‌, 2 ಫೋರ್‌, 4 ಸಿಕ್ಸರ್‌) ಸವಾಲಿನ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು. ಕ್ರೀಸ್‌ಗೆ ಬಂದ ಯಾವೊಬ್ಬ ಬ್ಯಾಟರ್‌ ಕೂಡ ನಿರಾಸೆ ಮೂಡಿಸಲಿಲ್ಲ. ಕ್ಯಾಮರೂನ್‌ ಗ್ರೀನ್‌ (38), ದಿನೇಶ್‌ ಕಾರ್ತಿಕ್‌ (14) ರನ್‌ ಗಳಿಸಿದರು.

ಫಾರ್ಮ್‌ ಕಳೆದುಕೊಂಡು ನಿರಾಸೆ ಮೂಡಿಸಿದ್ದ ಮ್ಯಾಕ್ಸ್‌ವೆಲ್‌ ಇಂದಿನ ಪಂದ್ಯದಲ್ಲಿ ಸ್ವಲ್ಪ ಹೊತ್ತು ಆಡಿದರೂ ಗಮನ ಸೆಳೆದರು. ಕೇವಲ 5 ಬಾಲ್‌ಗಳಿಗೆ 2 ಫೋರ್‌ ಮತ್ತು 1 ಸಿಕ್ಸ್‌ನೊಂದಿಗೆ 16 ರನ್‌ ಸಿಡಿಸಿದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಧೋನಿಗೆ ಕ್ಯಾಚ್‌ ನೀಡಿದರು. ನೋಬಾಲ್‌ ಮತ್ತು ವೈಡ್‌ ಸೇರಿ ಆರ್‌ಸಿಬಿಗೆ 8 ರನ್‌ ಹೆಚ್ಚುವರಿಯಾಗಿ ಬಂತು. ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ಹಾಗೂ ತುಷಾರ್ ದೇಶಪಾಂಡೆ, ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್‌ ಕಿತ್ತರು.

Rajat Patidar

ಆರ್‌ಸಿಬಿ ನೀಡಿದ 219 ರನ್‌ ಗುರಿ ಬೆನ್ನತ್ತಿದ ಸಿಎಸ್‌ಕೆಗೆ ಆರಂಭಿಕ ಆಘಾತ ಎದುರಾಯಿತು. ಚೆನ್ನೈ ರನ್‌ ಖಾತೆ ತೆರೆಯುವ ಮೊದಲೇ ನಾಯಕ ಗಾಯಕ್ವಾಡ್‌ ಔಟಾಗುವ ಮೂಲಕ ವಿಕೆಟ್‌ ಖಾತೆ ತೆರೆಯಿತು. ಮೊದಲ ಪವರ್‌ ಪ್ಲೇ ಮುಕ್ತಾಯಕ್ಕೆ 58 ರನ್‌ ಗಳಿಸಿದ್ದ ಸಿಎಸ್‌ಕೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

ಈ ಸಂದರ್ಭದಲ್ಲಿ ರಚಿನ್‌ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಜೊತೆಯಾಟ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತು. ಈ ಜೋಡಿ 41 ಬಾಲ್‌ಗಳಿಗೆ 61 ರನ್‌ಗಳ ಜೊತೆಯಾಟವಾಡಿತು. ರಚಿನ್‌ ಅರ್ಧಶತಕ ಗಳಿಸಿ (61 ರನ್‌, 37 ಬಾಲ್‌, 5 ಫೋರ್‌, 3 ಸಿಕ್ಸರ್‌) ಮಿಂಚಿದರು. ಅಜಿಂಕ್ಯ 33 ರನ್‌ಗಳಿಸಿ ಔಟಾದರು. ಈ ವೇಳೆ ರಚಿನ್‌ಗೆ ದುಬೆ ಜೊತೆಯಾದರು. ಜವಾಬ್ದಾರಿಯುತ ಆಟವಾಡುತ್ತಾ ಬಂದ ರಚಿನ್‌ 2 ರನ್‌ ಕದಿಯಲು ಮುಂದಾಗಿ ರನೌಟ್‌ ಆದರು. ಇವರ ಬೆನ್ನಲ್ಲೇ ಶಿವಂ ದುಬೆ ಕ್ಯಾಚ್‌ ನೀಡಿ ಹೊರನಡೆದಿದ್ದು ಆರ್‌ಸಿಬಿ ನಿಟ್ಟುಸಿರು ಬಿಡುವಂತಾಯಿತು.

CSK

ಈ ವೇಳೆ ಕ್ರೀಜ್‌ಗೆ ಬಂದ ಜಡೇಜಾ ಹೊಡಿಬಡಿ ಆಟವಾಡಿ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು. 22 ಬಾಲ್‌ಗಳಿಗೆ 42 ರನ್‌ ಬಾರಿಸಿ ಪ್ಲೇ-ಆಫ್‌ ಭರವಸೆ ಮೂಡಿಸಿದ್ದರು. ಅವರಿಗೆ ಮಾಜಿ ನಾಯಕ ಧೋನಿ ಕೂಡ ಸಾಥ್‌ ನೀಡಿದರು. ಧೋನಿ 13 ಬಾಲ್‌ಗೆ 25 ರನ್‌ಗಳಿಸಿ ಕ್ಯಾಚ್‌ ನೀಡಿ 19ನೇ ಓವರ್‌ನಲ್ಲಿ ನಿರ್ಗಮಿಸಿದ್ದು ಆರ್‌ಸಿಬಿಗೆ ಇನ್ನಷ್ಟು ಭರವಸೆ ನೀಡಿತು. ಪ್ಲೇ-ಆಫ್‌ ಕಾರಣಕ್ಕೆ ಕೊನೆ ಓವರ್‌ ವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು. ಚೆನ್ನೈ ತಂಡವನ್ನು 191 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾದರು.

ಆರ್‌ಸಿಬಿ ಪರ ಯಶ್ ದಯಾಳ್ 2 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಕ್ಯಾಮರೂನ್ ಗ್ರೀನ್ ತಲಾ 1 ವಿಕೆಟ್‌ ಕಿತ್ತು ಆರ್‌ಸಿಬಿ ಗೆಲುವಿಗೆ ಕಾರಣರಾದರು.

Share This Article