ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ; ಬೆಂಗ್ಳೂರಲ್ಲಿ ಅಭಿಮಾನಿಗಳ ಜಾತ್ರೆ – ಫ್ಯಾನ್ಸ್‌ ನೋಡಿ ವಿರಾಟ್‌ ಖುಷ್‌

Public TV
2 Min Read
RCB Fans

– ಈ ಸಲ ಕಪ್‌ ನಮ್ದೇ ಗುರು ಅಂತಿದ್ದಾರೆ ಫ್ಯಾನ್ಸ್‌

ಬೆಂಗಳೂರು: ಡಬಲ್‌ ಹ್ಯಾಟ್ರಿಕ್‌ ಗೆಲುವಿನೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2024ರ ಐಪಿಎಲ್‌ ಆವೃತ್ತಿಯ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಈ ಗೆಲುವು ಅಭಿಮಾನಿಗಳಿಗೆ ಟ್ರೋಫಿ ಗೆದ್ದಷ್ಟೇ ಖುಷಿ ಕೊಟ್ಟಿದೆ.

ಹೌದು. 20ನೇ ಓವರ್‌ 5ನೇ ಎಸೆತದಲ್ಲೇ ಆರ್‌ಸಿಬಿಗೆ ಗೆಲುವು ಖಚಿತವಾಗುತ್ತಿದಂತೆ ಅಭಿಮಾನಿಗಳು ನಿಂತಲ್ಲಿ ನಿಲ್ಲದೇ, ಕೂತಲ್ಲಿ ಕೂರದೇ ಕುಣಿದು ಕುಪ್ಪಳಿಸತೊಡಗಿದರು. ಕೆಲವರು ಅಲ್ಲಲ್ಲಿ ಕೇಕ್‌ ಮಾಡಿ ಸಂಭ್ರಮಿಸಿದರು. ಇನ್ನೂ ಕೆಲವರು ರಸ್ತೆಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ರಸ್ತೆಯಲ್ಲೇ ಅಪ್ಪಿಕೊಂಡು ಕುಣಿಯುತ್ತಿದ್ದರು.

ಇನ್ನೂ ಚಿನ್ನಸ್ವಾಮಿ ಸ್ಟೇಡಿಯಂನ 2 ಕಿಲೋಮೀಟರ್ ಸುತ್ತಮುತ್ತ ಬರುವ ರಾಜಭವನ ರಸ್ತೆ ಕ್ವೀನ್ಸ್ ರಸ್ತೆ, ಎಂ.ಜಿ ರಸ್ತೆಗಳಲ್ಲಿಯೂ ಆರ್‌ಸಿಬಿ, ಆರ್‌ಸಿಬಿ ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದರು. ಮ್ಯಾಚ್ ಮುಗಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ನಿಂದ ಆರ್‌ಸಿಬಿ ಆಟಗಾರರ ಬಸ್ ಹೊರಗಡೆ ಬರುತ್ತಿದ್ದಂತೆ ಅಭಿಮಾನಿಗಳು ಬಸ್ ಅಡ್ಡಗಟ್ಟಿ ಕುಣಿಯುತ್ತಿದ್ದರು. ಈ ಸಂಭ್ರಮವನ್ನು ವಿರಾಟ್‌ ಕೊಹ್ಲಿ ಸಹ ಬಸ್‌ನೊಳಗೆ ಕುಳಿತು ಕಣ್ತುಂಬಿಕೊಂಡು, ನಗೆ ಬೀರಿದರು. ಅಭಿಮಾನಿಗಳ ಸಂಭ್ರಮವನ್ನ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ನಗೆ ಬಿರುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಮತ್ತಷ್ಟೂ ಕುಣಿಯಲಾರಂಭಿಸಿದರು.

RCB Fans 2

ʻಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿಗೆ ಮಾಡು ಇಲ್ಲವೇ ಮಡಿಯುವ ಅವಕಾಶವಷ್ಟೇ ಇತ್ತು. ಇದರಿಂದ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟ್ಟಿದೆ.

ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.

Share This Article