ನವದೆಹಲಿ: ನೋಟ್ ಬ್ಯಾನ್ ಬಳಿಕ ಬಿಡುಗಡೆಯಾದ 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್‍ಬಿಐ ನಿಲ್ಲಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆರ್‍ಬಿಐ ಮೂಲಗಳನ್ನು ಆಧಾರಿಸಿ ವರದಿ ಪ್ರಕಟವಾಗಿದ್ದು, 2000 ರೂ. ನೋಟು ಬದಲಿಗೆ 200 ರೂ. ನೋಟ್ ಗಳನ್ನು ಬಿಡುಗಡೆ ಮಾಡಲು ಆರ್‍ಬಿಐ ಮುಂದಾಗುತ್ತಿದ್ದು, ಈ ನೋಟುಗಳು ಆಗಸ್ಟ್ ತಿಂಗಳಲ್ಲಿ ಚಲಾವಣೆಗೆ ಬರುವ ಸಾಧ್ಯತೆಯಿದೆ.
Advertisement
ಮೈಸೂರಿನಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈಗಾಗಲೇ 2000 ರೂ. ನೋಟ್ ಮುದ್ರಣ ಕಾರ್ಯ ಸ್ಥಗಿತಗೊಂಡಿದ್ದು, ಈ ಹಣಕಾಸು ವರ್ಷದಲ್ಲಿ 2 ಸಾವಿರ ರೂ.ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
2 ಸಾವಿರ ರೂ. ನೋಟುಗಳ ಚಲಾವಣೆ ಹಂತ ಹಂತವಾಗಿ ಕಡಿಮೆ ಮಾಡುತ್ತಿರುವುದರಿಂದ ಜನರ ವ್ಯವಹಾರಕ್ಕೆ ಸಮಸ್ಯೆ ಆಗದೇ ಇರಲು ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು 200 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
Advertisement
500 ರೂ. ಮತ್ತು 1 ಸಾವಿರ ರೂ. ನೋಟು ನಿಷೇಧಗೊಂಡ ಹಿನ್ನೆಲೆಯಲ್ಲಿ ಆರ್‍ಬಿಐ ಸುಮಾರು 7.4 ಲಕ್ಷ ಕೋಟಿ ರೂ. ಮೌಲ್ಯದ 3.7 ಶತಕೋಟಿ 2000 ರೂ. ನೋಟುಗಳನ್ನು ಇದೂವರೆಗೆ ಮುದ್ರಿಸಿದೆ. ಇದು ನೋಟು ನಿಷೇಧವಾಗಿರುವ 1 ಸಾವಿರ ರೂ. ಮುಖಬೆಲೆಯ 6.3 ಶತಕೋಟಿ ನೋಟುಗಳಿಗಿಂತ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
ನವೆಂಬರ್ 4ರ ವೇಳೆಗೆ ದೇಶದಲ್ಲಿ 17.7 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದರೆ, ಜುಲೈ 14ರ ವೇಳೆಗೆ ದೇಶದಲ್ಲಿ 15.22 ಲಕ್ಷ ಕೋಟಿ ನೋಟುಗಳು ಚಲಾವಣೆಯಾಗುತ್ತಿದೆ ಎಂದು ಆರ್‍ಬಿಐ ತಿಳಿಸಿದೆ.
ಆರ್‍ಬಿಐ ಹಂತ ಹಂತವಾಗಿ 2 ಸಾವಿರ ರೂ. ನೋಟುಗಳ ಚಲಾವಣೆಯನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಎಟಿಎಂಗಳಲ್ಲಿ ಈಗ ಹೆಚ್ಚಾಗಿ 2 ಸಾವಿರ ರೂ. ನೋಟುಗಳ ಬದಲಿಗೆ 500 ರೂ. ನೋಟುಗಳು ಸಿಗುತ್ತಿದೆ.
ಬ್ಯಾಂಕ್ ಗಳಿಗೆ ಆರ್‍ಬಿಐ ಈಗ ಹೆಚ್ಚಾಗಿ 500 ರೂ. ನೋಟುಗಳನ್ನು ಹೆಚ್ಚು ಪೊರೈಕೆ ಮಾಡುತ್ತಿದೆ. 2 ಸಾವಿರ ರೂ. ನೋಟುಗಳನ್ನು ಕೌಂಟರ್ ಗಳಲ್ಲಿ ಮಾತ್ರ ವಿತರಣೆ ಮಾಡುತ್ತಿದ್ದೇವೆ ಎಂದು ಬ್ಯಾಂಕ್ ಅಧಿಕಾರಿಗಳ ಹೇಳಿಕೆಯನ್ನು ಆಧಾರಿಸಿ ಕೆಲ ದಿನಗಳ ಹಿಂದೆ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು.
ಕಪ್ಪುಹಣವನ್ನು ತಡೆಗಟ್ಟಲು ನವೆಂಬರ್ 8 ರಂದು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗನ್ನು ನಿಷೇಧಿಸಿಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ತಿಳಿಸಿದ್ದರು. ಜನರ ಆರ್ಥಿಕ ವ್ಯವಹಾರಕ್ಕೆ ಸಮಸ್ಯೆ ಆಗದೇ ಇರಲು ಆರ್‍ಬಿಐ 2 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.
ಮೈಸೂರಿನ ಮೇಟಗಳ್ಳಿ, ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್, ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿ ಆರ್ಬಿಐ ಮುದ್ರಣ ಘಟಕವನ್ನು ಹೊಂದಿದೆ.