ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಉಳಿಸಿಕೊಂಡಿದೆ.
ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡ ಹಿನ್ನೆಲೆಯಲ್ಲಿ ಅಲ್ಪಾವಧಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವ ನಿರ್ಧಾರವನ್ನು ಆರ್‍ಬಿಐ ಕೈಗೊಂಡಿದೆ.
Advertisement
ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವ ಐದು ಮಂದಿಯ ಸದಸ್ಯರು ಇರುವ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆ ಬುಧವಾರ ನಡೆಯಿತು. ಈ ಸಭೆಯಲ್ಲಿ ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್ ರೆಪೊ) ಶೇ.5.75, ಬ್ಯಾಂಕ್‍ಗಳಿಗೆ ಆರ್‍ಬಿಐ ನೀಡುವ ಸಾಲದ ಬಡ್ಡಿ ದರವನ್ನು (ರೆಪೊ) ಶೇ.6ರ ಮಟ್ಟದಲ್ಲೇ ಉಳಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
Advertisement
ಇದೇ ವೇಳೆ ವಾರ್ಷಿಕವಾಗಿ ಈ ಹಿಂದೆ ಅಂದಾಜಿಸಿದ್ದ ಜಿಡಿಪಿ ದರ ಶೇ.7.3ರ ಬದಲಾಗಿ ಈ ಶೇ.6.7ಕ್ಕೆ ಕುಸಿತವಾಗಬಹುದು ಎಂದು ಅಂದಾಜಿಸಿದೆ.
Advertisement
ರೆಪೊ ದರ: ವಾಣಿಜ್ಯ ಬ್ಯಾಂಕುಗಳು ಆರ್‍ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರಿಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.
Advertisement
ರಿವರ್ಸ್ ರೆಪೊ: ವಾಣಿಜ್ಯ ಬ್ಯಾಂಕುಗಳು ಆರ್‍ಬಿಐಯಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೊ ರೇಟ್. ಆರ್‍ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್ ರೆಪೊ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‍ಬಿಐಗೆ ವರ್ಗಾಯಿಸುತ್ತದೆ.