ಮುಂಬೈ: ಬಜೆಟ್‌ನಲ್ಲಿ ಘೋಷಣೆಯಾದಂತೆ ಭಾರತದಲ್ಲಿ ಡಿಜಿಟಲ್ ರುಪಿ(Digital Rupee) ಅಧಿಕೃತವಾಗಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಸಗಟು(Central Bank Digital Currency Wholesale) ಕ್ಷೇತ್ರಕ್ಕೆ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದು ಎಂದು ವಿಶ್ಲೇಷಣೆಯಾಗುತ್ತಿರುವ ಡಿಜಿಟಲ್ ರುಪಿಯ ಬಗ್ಗೆ ಇಲ್ಲಿ ಕೆಲ ಮಾಹಿತಿಯನ್ನು ನೀಡಲಾಗಿದೆ.
ಏನಿದು ಡಿಜಿಟಲ್ ರುಪಿ?
ಸರಳವಾಗಿ ಹೇಳುವುದಾದರೆ ಡಿಜಿಟಲ್ ರೂಪದಲ್ಲಿರುವ ಹಣ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ ಡಿಜಿಟಲ್ ರುಪಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India)) ಬಿಡುಗಡೆ ಮಾಡುತ್ತದೆ. 2022ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಡಿಜಿಟಲ್ ಕರೆನ್ಸಿಯನ್ನು ಆರ್‌ಬಿಐ ಬಿಡುಗಡೆ ಮಾಡಲಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದರು.
Advertisement
Advertisement
ಯಾರು ಬಳಸಬಹುದು?
CBDC ಯನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಚಿಲ್ಲರೆ (Central Bank Digital Currency Retail) ಬಳಕೆ ಎಲ್ಲರಿಗೂ ಲಭ್ಯವಾದರೆ ಸಗಟು (Central Bank Digital Currency Wholesale) ಅನ್ನು ಆಯ್ದ ಹಣಕಾಸು ಸಂಸ್ಥೆಗಳ ಬಳಕೆಗೆ ಮಾತ್ರ ಅನುಮತಿ ನೀಡಲಾಗಿದೆ.
Advertisement
ಕ್ರಿಪ್ಟೋ ಕರೆನ್ಸಿ Vs ಡಿಜಿಟಲ್ ರುಪಿ:
ಬ್ಲಾಕ್‌ಚೈನ್ ತಂತ್ರಜ್ಞಾನದ(Blockchain Technology) ಅಡಿಯಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ವ್ಯವಹಾರ ನಡೆಯುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಮೂಲಕ ಇಲ್ಲಿ ಯಾವುದೇ ವ್ಯವಹಾರ ನಡೆಯುವುದಿಲ್ಲ. ಕ್ರಿಪ್ಟೋದಲ್ಲಿ ನಷ್ಟವಾದರೆ ಹೊಣೆಗಾರರು ಯಾರು ಇರುವುದಿಲ್ಲ. ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವುದರಿಂದ ಆರ್‌ಬಿಐ ಬಲವಾಗಿ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ವಿರೋಧಿಸುತ್ತಿದೆ ಮತ್ತು ಇವುಗಳಿಗೆ ಭಾರತದಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಆದರೆ ಡಿಜಿಟಲ್ ಕರೆನ್ಸಿ ಆರ್‌ಬಿಐ ನಿಯಂತ್ರಣದಲ್ಲಿ ಇರುತ್ತದೆ. ಹೇಗೆ ನಾಣ್ಯ ಮತ್ತು ರೂಪಾಯಿಗಳಿಗೆ ಕಾನೂನಿನ ಮಾನ್ಯತೆ ಇದೆಯೋ ಅದೇ ರೀತಿ ಈ ಡಿಜಿಟಲ್ ಕರೆನ್ಸಿಗೂ ಮಾನ್ಯತೆ ನೀಡಲಾಗಿದೆ. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್
Advertisement
ಎಲ್ಲಿ ಲಭ್ಯ?
ಮೊದಲ ಹಂತದಲ್ಲಿ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ, ಐಸಿಐಸಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ 9 ಬ್ಯಾಂಕ್‌ಗಳಿಗೆ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟ ಮಾಡಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಮಾತ್ರ ಡಿಜಿಟಲ್ ಕರೆನ್ಸಿ ಬಳಕೆಗೆ ಅನುಮತಿ ನೀಡಲಾಗಿದೆ.
ಲಾಭ ಏನು?
ಬಹಳ ಮುಖ್ಯವಾಗಿ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಯಾರ ಬಳಿಯು ಇರುವುದಿಲ್ಲ. ಆಗಾಗ ಏರಿಳಿತ ಸಂಭವಿಸುತ್ತಿರುತ್ತದೆ. ಆದರೆ ಡಿಜಿಟಲ್ ರುಪಿ ವ್ಯವಸ್ಥೆಯ ಮೇಲೆ ಆರ್‌ಬಿಐ ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ. ವಹಿವಾಟು ಶುಲ್ಕ ಇಳಿಕೆಯಾಗುವುದರಿಂದ ಎರಡು ಬ್ಯಾಂಕುಗಳ ನಡುವಿನ ವ್ಯವಹಾರ ಮತ್ತಷ್ಟು ಸರಳವಾಗಲಿದೆ. ಮುದ್ರಣ ವೆಚ್ಚ ಇರುವುದಿಲ್ಲ ಮತ್ತು ಹಾಳಾಗುವುದಿಲ್ಲ. ಅಷ್ಟೇ ಅಲ್ಲದೇ ಸಾಗಾಟ ಮಾಡುವ ಅವಶ್ಯಕತೆ ಇಲ್ಲ. ಇವುಗಳನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ನಕಲಿ ನೋಟುಗಳ ಹಾವಳಿ ಕಡಿಮೆಯಾಗಲಿದೆ.
ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡುವುದರ ಹೊರತಾಗಿಯೂ ಡಿಜಿಟೈಸ್ಡ್ ಕರೆನ್ಸಿಯನ್ನು ಹೊಂದುವುದರಿಂದ ಅಧಿಕೃತ ನೆಟ್‌ವರ್ಕ್‌ಗಳಲ್ಲಿ ನಡೆಯುವ ಎಲ್ಲಾ ವಹಿವಾಟುಗಳನ್ನು ಗಮನಿಸಲು ಸರ್ಕಾರಕ್ಕೆ ಸಹಾಯವಾಗಲಿದೆ. ದೇಶದ ಒಳಗಡೆ ಹಣ ಹೇಗೆ ಪ್ರವೇಶಿಸುತ್ತದೆ? ಹಣ ಹೇಗೆ ಹೋಗುತ್ತದೆ ಎನ್ನುವುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಭವಿಷ್ಯದಲ್ಲಿ ಉತ್ತಮ ಬಜೆಟ್ ಮತ್ತು ಆರ್ಥಿಕ ಯೋಜನೆಗಳನ್ನು ಮಾಡಲು ಇದು ಸಹಾಯವಾಗಬಹುದು.
ಹಂತ ಹಂತವಾಗಿ ಅನುಷ್ಠಾನ:
ಆರ್‌ಬಿಐ ಡಿಜಿಟಲ್ ಕರೆನ್ಸಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಜಾರಿ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಉದ್ಯಮಗಳು, ಸಂಸ್ಥೆಗಳು, ಖಾಸಗಿ ವಲಯಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.