ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಪ್ರದೀಪ್‌ ಕುಮಾರ್‌ ಪಂಜ ನೇಮಕ

Public TV
1 Min Read
RBI approves appointment of Pradeep Kumar Panja as Chairman of Karnataka Bank

ಬೆಂಗಳೂರು: ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಪ್ರದೀಪ್‌ ಕುಮಾರ್‌ ಪಂಜ ನೇಮಕವಾಗಿದ್ದಾರೆ.

ಕರ್ಣಾಟಕ ಬ್ಯಾಂಕಿನ  ಸ್ವತಂತ್ರ ನಿರ್ದೇಶಕರಾಗಿದ್ದ ಪ್ರದೀಪ್‌ ಕುಮಾರ್‌ ಪಂಜ ಅವರನ್ನು ಅರೆಕಾಲಿಕ ಅಧ್ಯಕ್ಷರನ್ನಾಗಿ ನವೆಂಬರ್‌ 2021ರಿಂದ ಅನ್ವಯವಾಗುವಂತೆ ಮೂರು ವರ್ಷಗಳ ಅವಧಿಯ ನೇಮಕಾತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಅನುಮೋದಿಸಿದೆ. ಬ್ಯಾಂಕಿನ ಪ್ರಸಕ್ತ ಅಧ್ಯಕ್ಷರಾದ ಜಯರಾಮ ಭಟ್‌ ಅವರ ಅಧಿಕಾರವಾಧಿ ನವೆಂಬರ್‌ 13ಕ್ಕೆ ಅಂತ್ಯವಾಗಲಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ(ಕಾರ್ಪೋರೇಟ್‌ ಬ್ಯಾಂಕಿಂಗ್‌) ಪ್ರದೀಪ್‌ ಕುಮಾರ್‌ ನಿವೃತ್ತರಾಗಿದ್ದಾರೆ. ಇದಕ್ಕೂ ಮೊದಲು ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌ನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ಹಲವು ವರ್ಷ ನಿರ್ವಹಿಸಿದ್ದರು.

RBI reuters

ಎಸ್‌ಬಿಐ ಜೊತೆಗಿನ 39 ವರ್ಷಗಳ ಒಡನಾಟದಲ್ಲಿ ಕಾರ್ಪೋರೇಟ್‌ ಮತ್ತು ಅಂತರಾಷ್ಟ್ರೀಯ ಬ್ಯಾಂಕಿಂಗ್‌, ಖಜಾನೆ ನಿರ್ವಹಣೆ, ಮಾಹಿತಿ ತಂತ್ರಜ್ಞಾನ, ರಿಟೇಲ್‌ ಬ್ಯಾಂಕಿಂಗ್‌, ವಹಿವಾಟು ಬ್ಯಾಂಕಿಂಗ್‌, ಕಾರ್ಯತಂತ್ರದ ಯೋಜನೆ, ವ್ಯಾಪಾರ ಅಭಿವೃದ್ಧಿ ಅಪಾಯ ನಿರ್ವಹಣೆ ಸೇರಿದಂತೆ ಬ್ಯಾಂಕಿನ ವಿವಿಧ ಕ್ಷೇತ್ರಗಳಲ್ಲಿ ಅನುಭವವನ್ನು ಹೊಂದಿದ್ದಾರೆ.

ಪ್ರದೀಪ್‌ ಕುಮಾರ್‌ ಪ್ರಸ್ತುತ ಬ್ಯಾಂಕ್‌ ಆಫ್‌ ಬ್ಯುರೋ(ಬಿಬಿಬಿ) ಸದಸ್ಯರಾಗಿದ್ದಾರೆ. ಆಸ್ತಿ ಪುನರ್‌ ನಿರ್ಮಾಣ, ಸಿಮೆಂಟ್‌, ರಿಯಲ್‌ ಎಸ್ಟೇಟ್‌, ಬ್ಯಾಂಕೇತರ ಹಣಕಾಸು ಸಂಸ್ಥೆ(ಎನ್‌ಬಿಎಫ್‌ಸಿ) ಇತ್ಯಾದಿ ವ್ಯವಹಾರದಲ್ಲಿ ತೊಡಗಿರುವ ಏಳು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ. ಇದನ್ನೂ ಓದಿ: ಉದ್ಯೋಗಿಗಳ ಬೆಸ್ಟ್‌ ಕಂಪನಿ ಔಟ್‌ – ಭಾರತದ ಯಾವ ಕಂಪನಿಗೆ ಎಷ್ಟನೇ ಸ್ಥಾನ?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜ ಗ್ರಾಮದ ಪ್ರದೀಪ್‌ ಕುಮಾರ್‌ ಕರ್ಣಾಟಕ ಬ್ಯಾಂಕ್‌ನಲ್ಲಿ 2020ರ ಆಗಸ್ಟ್‌ 19 ರಿಂದ ನಿರ್ದೇಶಕರಾಗಿದ್ದಾರೆ. ಪ್ರದೀಪ್‌ ಕುಮಾರ್‌ ನೇಮಕಾತಿಯನ್ನು ʼಸ್ವತಂತ್ರ ನಿರ್ದೇಶಕರಾಗಿʼ ಷೇರುದಾದರರು ಸೆಪ್ಟೆಂಬರ್‌ 2 ರಂದು ನಡೆದ 97ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *