Connect with us

Districts

ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

Published

on

ಉಡುಪಿ: ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ದಿನದಂದೇ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ.

ಆರ್‍ಎಸ್‍ಎಸ್ ಮತ್ತು ವಿಶ್ವಹಿಂದೂ ಪರಿಷದ್ ನ ರಾಮ ಮಂದಿರ ನಿರ್ಮಾಣ ಕುರಿತಾದ ಏಕಪಕ್ಷೀಯ ನಿರ್ಣಯದಿಂದ ರವಿಶಂಕರ್ ಗುರೂಜಿಗೆ ಮುಖಭಂಗವಾಗಿತ್ತು. ಧರ್ಮ ಸಂಸದ್ ಮುಗಿದ ನಂತರ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ರವಿಶಂಕರ ಗುರೂಜಿ ಶ್ರೀಕೃಷ್ಣನ ದರ್ಶನ ಮಾಡಿ ಚಂದ್ರಶಾಲೆಯಲ್ಲಿ ಕುಳಿತಿದ್ದರು.

ಬೆಳಗ್ಗೆಯ ಪೂಜೆಯಲ್ಲಿದ್ದ ಪೇಜಾವರ ಶ್ರೀಗಳು ರವಿಶಂಕರ್ ಗುರೂಜಿಯನ್ನು ಕಂಡು ಪೂಜೆ ಮುಗಿಸಿ ಬರುವುದಾಗಿ ಹೇಳಿ ಕೃಷ್ಣಪೂಜೆಯಲ್ಲಿ ತೊಡಗಿದರು. ನಂತರ ಮಠದ ಬಡಗು ಮಾಳಿಗೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಪೇಜಾವರ ಶ್ರೀ ಮತ್ತು ರವಿಶಂಕರ್ ಗುರೂಜಿ ಗೌಪ್ಯ ಮಾತುಕತೆ ಮಾಡಿದರು. ಪೇಜಾವರ ಶ್ರೀಗಳು ಧರ್ಮ ಸಂಸದ್ ನಲ್ಲಿ ನಡೆದ ಗೋಷ್ಟಿಗಳ ಬಗ್ಗೆ ಪೇಜಾವರ ಮಾಹಿತಿ ನೀಡಿದ್ದಾರೆ. ರವಿಶಂಕರ್ ಗುರೂಜಿ ತನ್ನ ಮಧ್ಯಸ್ಥಿಕೆಯ ಬೆಳವಣಿಗೆ ಬಗ್ಗೆ ಮಾತುಕತೆ ಮಾಡಿದ್ದಾರೆ.

ಗೌಪ್ಯ ಮಾತುಕತೆ ನಂತರ ಹೊರಬಂದ ಶ್ರೀರವಿಶಂಕರ್ ಗುರೂಜಿ, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇದೆ. ಸೌಹಾರ್ದ ಪ್ರಯತ್ನ ಮುಂದುವರೆಸುತ್ತೇನೆ. ನ್ಯಾಯಾಲಯದ ಹೊರಗೆ ರಾಮಜನ್ಮಭೂಮಿ ವಿವಾದ ಬಗೆಹರಿಸಲು ನಮ್ಮ ಪರ ಯತ್ನ ಮುಂದುವರೆಯುತ್ತದೆ. ನಾನು ಭೇಟಿಯಾದ ಎಲ್ಲರೂ ಮಂದಿರ ನಿರ್ಮಾಣದ ಪರವಾಗಿದ್ದಾರೆ. ಮುಸ್ಲಿಮರೂ ಸಹಮತ ವ್ಯಕ್ತಪಡಿಸಿದ್ದಾರೆ. ಆರ್‍ಎಸ್‍ಎಸ್ ತನ್ನದೇ ಅಭಿಪ್ರಾಯ ಹೊಂದಲು ಸ್ವತಂತ್ರ ಎಂದರು.

ಪೇಜಾವರಶ್ರೀ ಮಾತನಾಡಿ, ಗೌಪ್ಯ ಮಾತುಕತೆಯ ವಿವರಣೆಗಳನ್ನು ಹೇಳಲ್ಲ. ಧರ್ಮಸಂಸದ್‍ನಲ್ಲಿ ಗುರೂಜಿಗೆ ವಿರೋಧವಿತ್ತು ಎಂದು ಹೇಳಲಾರೆ. ನ್ಯಾಯಾಲಯದ ಹೊರಗೆ ತೀರ್ಮಾನವಾಗಬೇಕು ಎಂಬುದು ನಮ್ಮ ಅಪೇಕ್ಷೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಅನ್ನೋದು ಎಲ್ಲರ ಅಭಿಪ್ರಾಯ ಎಂದರು.

ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಜೊತೆ ಸಂಧಾನಕ್ಕೆ ಯತ್ನಿಸದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಗೈರು ಹಾಜರಿ ಹಾಕಿದ್ದರು ಎಂದು ಹೇಳಲಾಗುತ್ತಿದೆ.

Click to comment

Leave a Reply

Your email address will not be published. Required fields are marked *