ರವಿಕೆ ಪ್ರಸಂಗ: ನಿರ್ದೇಶಕ ಸಂತೋಷ್ ಕೊಡಂಕೇರಿ ಕಂಡಂತೆ

Public TV
3 Min Read
santhosh kodenkeri 1

ಸಾಕಷ್ಟು ಮಂದಿ ದೊಡ್ಡ ಬಜೆಟ್ಟಿನ ಹಿಟ್ ಸಿನಿಮಾಗಳು ಬಂದರಷ್ಟೇ ಚಿತ್ರರಂಗ ಉದ್ಧಾರವಾಗುತ್ತದೆ ಅಂದುಕೊಂಡಿರುತ್ತಾರೆ. ಆದರೆ, ಅಂಥಾದ್ದರ ನಡುವೆಯೂ ಹೊಸಾ ಪ್ರಯತ್ನಗಳು ದೃಷ್ಯರೂಪ ಧರಿಸಿ ಗೆಲ್ಲುವುದೊಂದೇ ಸಿನಿಮಾ ರಂಗದ ಜೀವಂತಿಕೆಯ ಲಕ್ಷಣ ಎಂಬುದು ಸಾರ್ವಕಾಲಿಕ ಸತ್ಯ. ಸದ್ಯದ ಮಟ್ಟಿಗೆ ಸಂತೋಷ್ ಕೊಡಂಕೇರಿ  (Santosh Kodankeri)ನಿರ್ದೇಶನದ `ರವಿಕೆ ಪ್ರಸಂಗ’ (Ravike Prasanga) ಅಂಥಾದ್ದೊಂದು ಅಪೇಕ್ಷಿತ ಬೆಳವಣಿಗೆಯ ಭಾಗವಾಗಿ ಕಾಣಿಸುತ್ತದೆ. ಇದೇ ಫೆಬ್ರವರಿ 16ರಂದು ತೆರೆಗಾಣಲಿರುವ ಈ ಚಿತ್ರ ಎಲ್ಲರ ಬದುಕಿಗೂ ತೀರಾ ಹತ್ತಿರದ ನಂಟು ಹೊಂದಿರುವ ಸೂಕ್ಷ್ಮ ಕಥಾನಕವನ್ನೊಳಗೊಂಡಿದೆ.

Ravike Prasanga 4 2

ರವಿಕೆಯ ಸುತ್ತ ಘಟಿಸೋ ಕಥೆಯನ್ನು ಎಲ್ಲಿಯೂ ಬೋರು ಹೊಡೆಸದಂತೆ, ಮನೋರಂಜನೆಗೆ ಕೊರತೆಯಾಗದೆ, ಭಾವ ಸೂಕ್ಷಕ್ಕೂ ಧಕ್ಕೆಯಾಗದಂತೆ ಕಟ್ಟಿ ಕೊಡುವುದೇ ಒಂದು ಸಾಹಸ. ಅದನ್ನು ಇಷ್ಟೂ ವರ್ಷಗಳ ಅನುಭವವನ್ನು ಧಾರೆಯೆರೆದು ಸಂತೋಷ್ ಕೊಡಂಕೇರಿ ಸಮರ್ಥವಾಗಿ ಮಾಡಿ ಮುಗಿಸಿದ್ದಾರೆ. ತಮ್ಮ ಮಡದಿ ಪಾವನಾ ಸಂತೋಷ್ ಬರೆದ ಕಥೆ ನೋಡಿದಾಕ್ಷಣವೇ ಅದಕ್ಕೆ ದೃಷ್ಯ ರೂಪ ನೀಡುವ ನಿರ್ಧಾರ ಮಾಡಿದ್ದವರು ಸಂತೋಷ್. ಆ ಯಾನವೇನೂ ಸಾಧಾರಣದ್ದಾಗಿರಲಿಲ್ಲ. ಆದರೆ, ಅದನ್ನು ಸಮರ್ಥವಾದ ತಂಡ, ಪ್ರತಿಭಾನ್ವಿತ ಕಲಾವಿದರು ಮತ್ತು ತಂತ್ರಜ್ಞರ ಬೆಂಬಲದೊಂದಿಗೆ ಪೂರ್ಣಗೊಳಿಸಿದ ತುಂಬು ತೃಪ್ತಿ ಸಂತೋಷ್ ರಲ್ಲಿದೆ.

santhosh kodenkeri 2

ಹೀಗೆ ಭಿನ್ನ ರವಿಕೆ ಪ್ರಸಂಗದಂಥಾ ಭಿನ್ನ ಕಥೆಗೆ ದೃಷ್ಯ ರೂಪ ನೀಡಿರುವ ಸಂತೋಷ್ ಕೊಡಂಕೇರಿಯವರದ್ದು ಕ್ರಿಯಾಶೀಲ ಕ್ಷೇತ್ರದಲ್ಲಿ ಹದಿನಾರು ವರ್ಷಗಳ ಅನುಭವ. ನೂರಕ್ಕೂ ಹೆಚ್ಚು ಕಾರ್ಪೊರೇಟ್ ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ಅವರು ಒಂದಷ್ಟು ಪ್ರಯೋಗಾತ್ಮಕ ಸಾಹಸಗಳನ್ನು ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. 2016ರಲ್ಲಿ ಹೋಂ ಸ್ಟೇ ಅಂತೊಂದು ಸಿನಿಮಾ ನಿರ್ದೇಶನ ಮಾಡಿದ್ದ ಸಂತೋಷ್, ಅದನ್ನು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ರೂಪಸಿ ಗೆದ್ದಿದ್ದರು. ಆ ನಂತರ ದಿಗಿಲ್ ಎಂಬ ತಮಿಳು ಚಿತ್ರವನ್ನೂ ಕೂಡಾ ನಿರ್ದೇಶನ ಮಾಡಿದ್ದರು. ಕೊರೋನಾ ಕಾಲದಲ್ಲಿ ಮತ್ತೊಂದು ಸಾಹಸಕ್ಕೆ ಒಡ್ಡಿಕೊಂಡಿದ್ದ ಸಂತೋಷ್, ಒಂದೂರಲ್ಲಿ ಒಬ್ಬ ರಾಜ ಇದ್ದ ಎಂಬ ಏಕವೈಕ್ತಿ ಪ್ರದರ್ಶನದ ಸಿನಿಮಾ ರೂಪಿಸಿದ್ದರು. ರವೀಂದ್ರನಾಥ ಟ್ಯಾಗೋರ್ ರಚಿಸಿದ್ದ ಆ ಕೃತಿಯನ್ನು ಯಶಸ್ವಿಯಾಗಿ ದೃಷ್ಯರೂಪಕ್ಕಿಳಿಸಿದ್ದರು. ಆ ಚಿತ್ರದಲ್ಲಿ ಓರ್ವ ಕಲಾವಿದ ಇಪ್ಪತ್ನಾಲಕ್ಕು ಪಾತ್ರಗಳನ್ನು ನಿರ್ವಹಿಸುವ ಮೂಲಕ ಆ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲಾಗಿತ್ತು. ಆ ನಂತರದಲ್ಲಿ ತಮ್ಮ ಮೂಲ ವೃತ್ತಿಯತ್ತ ಹೊರಳಿಕೊಂಡಿದ್ದರೂ ಸಿನಿಮಾ ಧ್ಯಾನದಲ್ಲಿದ್ದ ಅವರ ಪಾಲಿಗೆ ಗುಂಗಿನಂತೆ ತಲೆಗೇರಿಕೊಂಡು ಕಾಡಿದ್ದ ರವಿಕೆ ಪ್ರಸಂಗ.

Ravike Prasanga 3

ಇದು ಬರೀ ಹೆಂಗಳೆಯರಿಗೆ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಹತ್ತಿರಾಗುವ, ಸಿನಿಮಾ ನೋಡಿ ಹೊರ ಬಂದ ಮೇಲೂ ಕಾಡುವ ಗುಣಗಳನ್ನು ಒಳಗೊಂಡಿರುವ ಚಿತ್ರವೆಂಬುದು ಸಂತೋಷ್ ರ ಸ್ಪಷ್ಟನೆ. ರವಿಕೆ ಎಂಬುದು ನಮ್ಮ ಸಂಸ್ಕಂತಿಯೂ ಸೇರಿದಂತೆ ಒಟ್ಟಾರೆ ಭಾರತೀಯರ ಭಾವಕೋಶದಲ್ಲೊಂದು ಭಿನ್ನವಾದ ಸ್ಥಾನ ಗಿಟ್ಟಿಸಿಕೊಂಡಿದೆ. ಆದರೆ, ಓರ್ವ ಹೆಣ್ಣಿಗೆ ರವಿಕೆಯೆಂಬೋ ಮಾಯೆ ಬೇರೆಯದ್ದೇ ರೀತಿಯಲ್ಲಿ ಬದುಕಿನ ಪ್ರತೀ ಘಟ್ಟದಲ್ಲಿಯೂ ಎದುರುಗೊಳ್ಳುತ್ತೆ. ಅದಕ್ಕೆ ತನ್ನ ಚಹರೆಗನುಗುಣವಾಗಿ ಬೆಸೆಯೋ ಗುಣವೂ ಇದೆ. ಆ ಕ್ಷಣಕ್ಕೆ ನಿರಾಸೆಗೆ ತಳ್ಳಿ, ಸಿಟ್ಟು ಉಕ್ಕಿಸಿ ಮತ್ತೇನೋ ನಿರ್ಧಾರ ಕೈಗೊಳ್ಳುವಂತೆ ಮಾಡೋ ಶಕ್ತಿಯೂ ಇದೆ. ಅಂಥಾದ್ದೇನಿದೆ ಅನ್ನೋ ಕುತೂಹಲ ತಣಿಯಲು ಇನ್ನೊಂದು ವಾರವಷ್ಟೇ ಬಾಕಿ ಉಳಿದುಕೊಂಡಿದೆಯಷ್ಟೇ.

 

ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಮೂಲಕ ದೊಡ್ಡ ಮಟ್ಟದ ಗೆಲುವು ದಾಖಲಿಸಲಿದೆ ಎಂಬ ನಂಬಿಕೆ ಸಂತೋಷ್ ಮತ್ತು ಚಿತ್ರತಂಡದಲ್ಲಿದೆ. ಸದ್ಯದ ವಾತಾವರಣ ಅದಕ್ಕೆ ಪೂರಕವಾಗಿಯೂ ಇದೆ. ಇಂಥಾ ಭಿನ್ನ ಬಗೆಯ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸಿದರೆ ಚಿತ್ರರಂಗಕ್ಕೆ ಮತ್ತಷ್ಟು ಶಕ್ತಿಯಂತೂ ಸಿಕ್ಕೇ ಸಿಗುತ್ತದೆ. ಅದು ರವಿಕೆ ಪ್ರಸಂಗದ ಮೂಲಕ ಸಾಧ್ಯವಾಗಲಿದೆ ಎಂಬ ನಂಬಿಕೆ ಸಂತೋಷ್ ರದ್ದು. ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ  ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನವಿದೆ. ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ.

Share This Article