ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ‘ದ ಜಡ್ಜ್ ಮೆಂಟ್’ (The Judgment) ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. G9 communication media & Entertainment ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ(ನಾಡಗೌಡ) (Gururaja Kulkarni) ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಆಕ್ಸಿಡೆಂಟ್, ಲಾಸ್ಟ್ ಬಸ್, ಅಮೃತ ಅಪಾರ್ಟ್‌ಮೆಂಟ್ಸ್ ಚಿತ್ರಗಳನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು ಹಾಗೂ ಈ ಚಿತ್ರಗಳನ್ನು ಗುರುರಾಜ್ ಬಿ ಕುಲಕರ್ಣಿ ಅವರೆ ನಿರ್ದೇಶಿಸಿದ್ದರು. ಸಂಸ್ಥೆಯ ನಾಲ್ಕನೇ ಚಿತ್ರವಾಗಿ ದ ಜಡ್ಜ್ ಮೆಂಟ್ ಚಿತ್ರ ನಿರ್ಮಾಣವಾಗುತ್ತಿದೆ.
ಇದೊಂದು ಲಿಗಲ್ ಸಿಸ್ಟಮ್ ಕುರಿತಾದ ಚಿತ್ರ. ಇದೇ ಏಪ್ರಿಲ್ 24ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಗುರುರಾಜ ಬಿ ಕುಲಕರ್ಣಿ (ನಾಡಗೌಡ) ಮಾಹಿತಿ ನೀಡಿದರು.
ನಿರ್ದೇಶಕರು ಆಕ್ಸಿಡೆಂಟ್ ಮಾಡಿ, ಲಾಸ್ಟ್ ಬಸ್ ಹತ್ತಿ, ಅಮೃತ ಅಪಾರ್ಟ್‌ಮೆಂಟ್ಸ್ ಗೆ ಹೋಗಿ ಈಗ ಜಡ್ಜ್ ಮೆಂಟ್ ನೀಡಲು ಬಂದಿದ್ದಾರೆ. ಈ ಚಿತ್ರದ ಕಥೆ ಚೆನ್ನಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್. ನಾವೆಲ್ಲ ಸದ್ಯದಲ್ಲೇ ಮತ್ತೊಂದು ಜಡ್ಜ್ ಮೆಂಟ್ ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ ದ ಜಡ್ಜ್ ಮೆಂಟ್ ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ನಾಗಾಭರಣ ಹಾರೈಸಿದರು. ಇದನ್ನೂ ಓದಿ:ಜುಲೈನಲ್ಲಿ ಹೆರಿಗೆ : ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ಪತ್ನಿ ಉಪಾಸನಾ
ದಿಗಂತ್ (Digant), ಧನ್ಯ, ಲಕ್ಷ್ಮೀ ಗೋಪಾಲಸ್ವಾಮಿ, ರೂಪ ರಾಯಪ್ಪ ಮುಂತಾದವರು ದ ಜಡ್ಜ್ ಮೆಂಟ್ ಕುರಿತು ಮಾತನಾಡಿದರು. ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ .