-ಮಡಿವಾಳದಲ್ಲಿ ಸ್ಪೆಷಲ್ ಡ್ರಿಲ್
ಬೆಂಗಳೂರು: ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಕಳೆದ 30 ವರ್ಷಗಳಿಂದ ಪೊಲೀಸರಿಗೆ ಬೇಕಿದ್ದ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತರಲಾಗಿದೆ.
ಸೆನೆಗಲ್ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಿಸಲು ಆಗಿನಿಂದಲೇ ಪ್ರಯತ್ನಗಳು ನಡೆದಿದ್ದವು. ಆದರೆ ಉಭಯ ದೇಶಗಳ ಮಧ್ಯೆ ಹಸ್ತಾಂತರ ಒಪ್ಪಂದ ಏರ್ಪಡದ ಹಿನ್ನೆಲೆಯಲ್ಲಿ ರವಿ ಪೂಜಾರಿ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಹಸ್ತಾಂತರ ಪ್ರಕ್ರಿಯೆಗೆ ಇದ್ದ ತೊಡಕುಗಳು ನಿವಾರಣೆ ಆದ ಹಿನ್ನೆಲೆಯಲ್ಲಿ ಕೋರ್ಟ್ ಎರಡು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ರಾತ್ರಿ 12.40ರ ವಿಮಾನದಲ್ಲಿ ರವಿ ಪೂಜಾರಿಯನ್ನು ಕರೆ ತರಲಾಗಿದ್ದು, ಮಡಿವಾಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಇಂದು ರವಿ ಪೂಜಾರಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್‍ಗೆ ಹಣಕ್ಕೆ ಬೆದರಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ. ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಕೇಸ್ ಇವೆ.
ಮಲ್ಪೆ ಮೂಲದ ರವಿ ಪೂಜಾರಿ ಮುಂಬೈನಲ್ಲಿಯೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದನು. ಬಾಲಾ ಜ್ವಾಲೆಯನ್ನು ಕೊಲೆ ಮಾಡಿದ್ದ ರವಿ ಪೂಜಾರಿ ಭೂಗತ ಲೋಕದಲ್ಲಿ ಪ್ರವರ್ಧಮಾನಕ್ಕೆ ಬಂದು, ಭೂಗತ ಪಾತಕಿ ಚೋಟಾ ರಾಜನ್ ತಂಡಕ್ಕೆ ಸೇರ್ಪಡೆಯಾಗಿದ್ದನು. 1990ರಲ್ಲಿ ದುಬೈಗೆ ಎಸ್ಕೇಪ್ ಆಗಿದ್ದ ರವಿ ಪೂಜಾರಿ ಅಲ್ಲಿಂದಲೇ ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹಾರ್, ನಿರ್ಮಾಪಕ ರಾಕೇಶ್ ರೋಷನ್‍ಗೆ ಬೆದರಿಕೆ ಹಾಕಿದ್ದನು. ತನ್ನ ಹಿಂಬಾಲಕರ ಮೂಲಕ ಮುಂಬೈನಲ್ಲಿ ಓಂಪ್ರಕಾಶ್ ಕುಕ್ರೆಜಾ ಕೊಲೆ, ಬಿಲ್ಡರ್ಸ್ ಕೊಲೆಗೆ ಯತ್ನಿಸಿದ್ದನು.