Bengaluru City
ಭೂಗತ ಪಾತಕಿ ರವಿ ಪೂಜಾರಿಗೆ ಮಗಳ ಭವಿಷ್ಯದ್ದೇ ಚಿಂತೆ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಗೆ ಸಿಸಿಬಿ ಪೊಲೀಸರ ತನಿಖೆಯ ಒತ್ತಡಕ್ಕಿಂತ ತನ್ನ ಮಗಳ ಭವಿಷ್ಯದ ಬಗ್ಗೆಯೇ ಚಿಂತೆ ಹೆಚ್ಚಾಗಿದೆಯಂತೆ.
ಫೆಬ್ರವರಿ 24ರಂದು ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತರಲಾಗಿದ್ದು, ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರವಿ ಪೂಜಾರಿಗೆ ವಿಚಾರಣೆಯ ಬಗ್ಗೆ ಒತ್ತಡವಿಲ್ಲವಂತೆ. ತನ್ನ ಮಗಳದ್ದೇ ಚಿಂತೆಯಾಗಿದೆಯಂತೆ. ಡಾನ್ ರವಿ ಪೂಜಾರಿ ಮಗಳು ಸೆನೆಗಲ್ ದೇಶದಲ್ಲಿ ಪದವಿ ಓದುತ್ತಿದ್ದು, ಕೊನೆಯ ವರ್ಷದ ಪರೀಕ್ಷೆಯ ಸಿದ್ಧತೆಯಲ್ಲಿದ್ದಾಳೆ. ರವಿ ಪೂಜಾರಿ ಸೆನೆಗಲ್ ಜೈಲಿನಲ್ಲಿದ್ದಾಗ ಮಗಳ ಓದಿಗೆ ಯಾವುದೇ ಅಡ್ಡಿ ಆತಂಕ ಇರಲಿಲ್ಲವಂತೆ. ತಂದೆಯನ್ನು ನೋಡಬೇಕು ಎನ್ನಿಸಿದಾಗಲೆಲ್ಲ ಜೈಲಿಗೆ ಹೋಗಿ ನೋಡಿಕೊಂಡು ಬರುತ್ತಿದ್ದಳಂತೆ. ಆದರೆ ಇದೀಗ ಪಾತಕಿ ರವಿ ಪೂಜಾರಿಯನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದಿರುವುದರಿಂದ ಮಗಳ ಜೊತೆ ಮಾತನಾಡವುದು ಹಾಗೂ ನೋಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಂತೆಗೀಡಾಗಿದ್ದಾನೆ.
ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ನಾನು ಬೆಂಗಳೂರಿನಲ್ಲಿರುವ ಚಿಂತೆಯಲ್ಲೇ ಪರೀಕ್ಷೆಗೆ ತಯಾರಾಗದೇ, ನನ್ನ ಕೊರಗಿನಲ್ಲಿ ಓದದೆ, ಪರೀಕ್ಷೆ ಫೇಲ್ ಆಗುತ್ತಾಳೇನೋ ಎಂಬ ಚಿಂತೆಯಲ್ಲಿಯೇ ರವಿ ಪೂಜಾರಿ ಕಾಲ ದೂಡುತ್ತಿದ್ದಾನೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ರವಿ ಪೂಜಾರಿ ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್ ಅವರ ಬಳಿ ಹಣದ ಬೆಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ. ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಕೇಸ್ ದಾಖಲಾಗಿವೆ.
ಈತನನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಬರೋಬ್ಬರಿ ಆರು ತಿಂಗಳುಗಳ ಕರೆಯ ಜಾಡು ಹಿಡಿದು ಮೂಲಕ್ಕೆ ಕೈ ಹಾಕಿ ರವಿ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು, ಎರಡು ವರ್ಷದ ನಂತರ ಬೆಂಗಳೂರಿಗೆ ಕರೆತಂದಿದ್ದಾರೆ.
ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಕಳೆದ 30 ವರ್ಷಗಳಿಂದ ಪೊಲೀಸರಿಗೆ ಬೇಕಿದ್ದ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಫೆಬ್ರವರಿ 24ರಂದು ಬೆಂಗಳೂರಿಗೆ ಕರೆ ತರಲಾಗಿದೆ. ಸೆನೆಗಲ್ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಿಸಲು ಆಗಿನಿಂದಲೇ ಪ್ರಯತ್ನಗಳು ನಡೆದಿತ್ತು. ಆದರೆ ಉಭಯ ದೇಶಗಳ ಮಧ್ಯೆ ಹಸ್ತಾಂತರ ಒಪ್ಪಂದ ಏರ್ಪಡದ ಹಿನ್ನೆಲೆಯಲ್ಲಿ ರವಿ ಪೂಜಾರಿ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಹಸ್ತಾಂತರ ಪ್ರಕ್ರಿಯೆಗೆ ಇದ್ದ ತೊಡಕುಗಳು ನಿವಾರಣೆ ಆದ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿಗೆ ಕರೆ ತರಲಾಗಿದೆ. ಫೆಬ್ರವರಿ 24ರ ರಾತ್ರಿ ವಿಮಾನದಲ್ಲಿ ರವಿ ಪೂಜಾರಿಯನ್ನು ಕರೆ ತರಲಾಗಿದ್ದು, ಮಡಿವಾಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
