ಬೆಂಗಳೂರು: ಒಂದು ಹೊಸಾ ಬಗೆಯ ಚಿತ್ರ ಹಲವಾರು ಹೊಸಾ ಪ್ರತಿಭೆಗಳನ್ನೂ ಪರಿಚಯಿಸುತ್ತೆ. ಇದೇ ವಾರ ಬಿಡುಗಡೆಯಾಗುತ್ತಿರೋ ಮಧುಚಂದ್ರ ನಿರ್ದೇಶನದ ರವಿ ಹಿಸ್ಟರಿ ಚಿತ್ರವೂ ಈ ಸಾಲಿನಲ್ಲಿ ಸೇರಿಕೊಳ್ಳುತ್ತೆ. ಈ ಸಿನಿಮಾದ ನಾಯಕಿಯಾಗಿ ನಟಿರುವ ಐಶ್ವರ್ಯಾ ರಾವ್ ಕೂಡಾ ಹೊಸಾ ಪ್ರತಿಭೆಯೇ. ಕಾಲೇಜು ದಿನಗಳಲ್ಲಿ ನೃತ್ಯದತ್ತ ಕದಲಿದ ಹೆಜ್ಜೆಗಳೇ ಐಶ್ವರ್ಯಾರನ್ನು ನಟಿಯಾಗಿ ರೂಪುಗೊಳ್ಳುವಂತೆ ಮಾಡಿದ್ದೊಂದು ಚೆಂದದ ಕಥೆ. ಅದನ್ನು ರವಿ ಹಿಸ್ಟರಿಯಲ್ಲಿನ ಪಾತ್ರವೇ ಮತ್ತಷ್ಟು ರೋಚಕವಾಗಿಸೋ ಭರವಸೆ ಐಶ್ವರ್ಯಾರದ್ದು.
Advertisement
ಹೀಗೆ ರವಿಹಿಸ್ಟರಿಯ ನಾಯಕಿಯಾಗಿ ಎಂಟ್ರಿ ಕೊಡುತ್ತಿರೋ ಐಶ್ವರ್ಯಾ ಮೂಲವಿರೋದು ಉಡುಪಿಯಲ್ಲಿ. ಕನ್ನಡದ ಕವಯತ್ರಿ ಸುಜಾತಾ ಅವರ ಪುತ್ರಿಯಾದ ಐಶ್ವರ್ಯಾ ಬೆಳೆದದ್ದೆಲ್ಲ ಮೈಸೂರಿನಲ್ಲಿಯೇ. ಡಾಲಿ ಧನಂಜಯ್ ಥರದ ಪ್ರತಿಭೆಗಳು ಅರಳಿಕೊಂಡ ಸಂಸ್ಥೆಯಲ್ಲಿಯೇ ನಟನಾ ತರಬೇತಿಯನ್ನೂ ಪಡೆದುಕೊಂಡಿರೋ ಐಶ್ವರ್ಯಾ ಮೂಲತಃ ನೃತ್ಯಗಾರ್ತಿ. ಇವರ ಪಾಲಿಗೆ ರವಿ ಹಿಸ್ಟರಿಯ ನಾಯಕಿಯಾಗೋ ಅವಕಾಶ ಕೂಡಿ ಬಂದಿದ್ದೇ ಆಕಸ್ಮಿಕವಾಗಿ.
Advertisement
ರವಿ ಹಿಸ್ಟರಿ ಚಿತ್ರಕ್ಕೆ ಐಶ್ವರ್ಯಾ ಆಡಿಷನ್ ಮೂಲಕವೇ ಆಯ್ಕೆಯಾಗಿದ್ದರು. ಚಿತ್ರೀಕರಣಕ್ಕೂ ಮುಂಚೆ ವರ್ಕ್ ಶಾಪ್ ಗೆ ಹಾಜರಾಗಿ ಅಲ್ಲಿ ಸಂಪೂರ್ಣ ತರಬೇತಿಯನ್ನೂ ಕೂಡಾ ಐಶ್ವರ್ಯಾ ಪಡೆದುಕೊಂಡಿದ್ದರು. ನಿರ್ದೇಶಕರು ಸೇರಿದಂತೆ ಎಲ್ಲರೂ ಪ್ರತೀ ಹಂತದಲ್ಲಿಯೂ ಆತ್ಮೀಯವಾಗಿಯೇ ತಿದ್ದುತ್ತಾ ಈ ಪಾತ್ರಕ್ಕೆ ಪರಿಣಾಮಕಾರಿಯಾಗಿ ಜೀವ ತುಂಬಲು ಸಹಕರಿಸಿದರೆಂಬ ಧನ್ಯತಾಭಾವ ಐಶ್ವರ್ಯಾಗಿದೆ.
Advertisement
Advertisement
ಈ ಚಿತ್ರದಲ್ಲಿ ಐಶ್ವರ್ಯಾರದ್ದು ಕಾಲೇಜು ಹುಡುಗಿಯ ಪಾತ್ರ. ಇಂಜಿನಿಯರಿಂಗ್ ಓದುತ್ತಿರೋ ಹುಡುಗಿಯಾಗಿ ಅವರು ನಟಿಸಿದ್ದಾರೆ. ಪಕ್ಕಾ ಬೋಲ್ಡ್ ಶೇಡಿನ ಈ ಪಾತ್ರ ಯಾವುದೇ ಸನ್ನಿವೇಶಕ್ಕಾದರೂ ಹಿಂದೆ ಮುಂದೆ ನೋಡದೇ ರಿಯಾಕ್ಟ್ ಮಾಡುತ್ತೆ. ಎಂಥಾ ಸಂದರ್ಭವಿದ್ದರೂ ಮುನ್ನುಗ್ಗುತ್ತೆ. ಅಂಥಾದ್ದೊಂದು ಪಾತ್ರವನ್ನು ಎಂಜಾಯ್ ಮಾಡುತ್ತಲೇ ನಿಭಾಯಿಸಿರುವ ಐಶ್ವರ್ಯಾ ಈ ಮೂಲಕ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ.
ಸಾಮಾನ್ಯವಾಗಿ ಯಾರೇ ಹೆಣ್ಣುಮಕ್ಕಳು ನಟಿಯಾಗ ಬೇಕೆಂಬ ಆಸೆಯಿಟ್ಟುಕೊಂಡರೆ ಮೊದಲು ವಿರೋಧ ವ್ಯಕ್ತವಾಗೋದೇ ಮನೆ ಮಂದಿಯಿಂದ. ಆದರೆ ಈ ವಿಚಾರದಲ್ಲಿ ಐಶ್ವರ್ಯಾ ಅದೃಷ್ಟವಂತೆ. ಯಾಕೆಂದರೆ ಬಾಲ್ಯದಿಂದಲೂ ಮಗಳಿಗೆ ಅಪ್ಪಟ ಸಾಹಿತ್ಯಕ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದ್ದವರು ಅವರಮ್ಮ ಸುಜಾತ. ಸ್ವತಃ ಕವಯತ್ರಿ, ಕಥೆಗಾರ್ತಿಯೂ ಆಗಿರುವ ಸುಜಾತಾ ಅವರು ಚೌಕಟ್ಟುಗಳಾಚೆಗೆ ಆಲೋಚಿಸುತ್ತಾ ಬದುಕುವ ಕ್ರಮವನ್ನು ಮಗಳಿಗೂ ಕಲಿಸಿದ್ದರು. ಸ್ವತಃ ನಟಿಯಾಗಬೇಕೆಂದು ಆಸೆ ಹೊಂದಿದ್ದ ಸುಜಾತಾರಿಗೆ ಕೆಲ ಕಟ್ಟುಪಾಡುಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ಮಗಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಿಂದಲೇ ಐಶ್ವರ್ಯಾರ ಆಸಕ್ತಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.
ಅಮ್ಮನ ಇಂಥಾ ಪ್ರೋತ್ಸಾಹದಿಂದಲೇ ಮರಿಮಲ್ಲಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಶ್ವರ್ಯಾ ನೃತ್ಯಪಟುವಾಗಿ ಹೊರಹೊಮ್ಮಿದ್ದರು. ಸಾಲ್ಸಾ, ಬೆಲ್ಲಿ ಡ್ಯಾನ್ಸ್ ಮುಂತಾದ ನೃತ್ಯ ಪ್ರಾಕಾರಗಳಲ್ಲಿ ಪಾರಂಗತೆಯಾಗಿರುವ ಐಶ್ವರ್ಯಾ ಇದುವರೆಗೂ ಐವತ್ತಕ್ಕೂ ಹೆಚ್ಚು ಯಶಸ್ವೀ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಐಶ್ವರ್ಯಾ ನೃತ್ಯ ಪ್ರದರ್ಶನವೊಂದನ್ನು ನೋಡಿದವರೊಬ್ಬರು ಸಿನಿಮಾ ಆಫರ್ ಕೊಟ್ಟಿದ್ದರಂತೆ. ಐಶ್ವರ್ಯಾ ಮನೇಲಿ ಬಂದು ಮಾತಾಡಿ ಅಂದಾಗ ಅಮ್ಮ ಸುಜಾತಾರಿಗೂ ಕಥೆ ಹೇಳಿದ್ದರಂತೆ. ಆ ಮೂಲಕವೇ ಐಶ್ವರ್ಯಾ ನಟಿಯಾಗಿ ಪಾದಾರ್ಪಣೆ ಮಾಡಿದ್ದರು. ವಿಶೇಷವೆಂದರೆ, ರವಿ ಹಿಸ್ಟರಿಗಿಂತಲೂ ಮೊದಲೇ ಅವರು ಒಂದಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಣಹೇಡಿ, ಬಡ್ಡಿ ಮಗಂದ್ ಲೈಫು, ಮೈಸೂರ್ ಡೈರೀಸ್ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ನಾಯಕಿಯಾಗಿದ್ದಾರೆ.
ಆದರೆ ರವಿ ಹಿಸ್ಟರಿಯೇ ಅವರ ಮೊದಲ ಚಿತ್ರವಾಗಿ ದಾಖಲಾಗೋ ಲಕ್ಷಣಗಳಿವೆ. ರಣಹೇಡಿ ಮುಂತಾದ ಚಿತ್ರಗಳಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಿರೋ ಐಶ್ವರ್ಯಾಗೆ ಅಂಥಾ ಪಾತ್ರಗಳ ಮೂಲಕವೇ ಜನರ ಮನಸು ಗೆಲ್ಲೋ ಆಸೆ. ಈಗಾಗಲೇ ಅವರ ಮುಂದೆ ಸಾಲು ಸಾಲು ಅವಕಾಶಗಳಿವೆ. ಅದೆಲ್ಲವನ್ನೂ ಎಚ್ಚರದಿಂದಲೇ ಪರಾಮರ್ಶಿಸಿ ಒಪ್ಪಿಕೊಳ್ಳುತ್ತಿರೋ ಐಶ್ವರ್ಯಾ ಕನ್ನಡ ಚಿತ್ರರಂಗದ ಐಶ್ವರ್ಯದಂಥಾ ನಟಿಯಾಗೋ ಲಕ್ಷಣಗಳೇ ಹೆಚ್ಚಾಗಿವೆ.