Connect with us

ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ

ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ

ಬೆಂಗಳೂರು: ಸೋಮವಾರ ಪತಿ ರವಿ ಬೆಳಗೆರೆಯನ್ನು ಬೆಂಬಲಿಸಿ ಪೋಸ್ಟ್ ಪ್ರಕಟಿಸಿದ್ದ ಯಶೋಮತಿ ಸಾರಂಗಿ ಅವರು ಮಂಗಳವಾರ ಫೇಸ್‍ಬುಕ್ ನಲ್ಲಿ ಸುನಿಲ್ ಹೆಗ್ಗರವಳ್ಳಿ ವಿರುದ್ಧ ಸಿಡಿದಿದ್ದಾರೆ.

“ನಾನೇನಾದರೂ ಸುನಿಲ್ ಹೆಗ್ಗರವಳ್ಳಿಯ ಸ್ಥಾನದಲ್ಲಿದ್ದಿದ್ದರೆ ಅವರ ಪರಮ ಗುರುವಾದ ರವಿಯ ಬಗ್ಗೆ ಹೀಗೆಲ್ಲ ಮಾಧ್ಯಮದಲ್ಲಿ ಅವಮಾನಕರ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ. ಇನ್ನೊಂದೆರಡು ಕೇಸುಗಳು ಜಡಿಯುವಂತೆ ಪ್ರೇರೇಪಿಸುತ್ತಿರಲಿಲ್ಲ. ಜೊತೆಗೆ ಹೆದರಿ ಪೊಲೀಸ್ ರಕ್ಷಣೆಯನ್ನು ಕೇಳುತ್ತಲೂ ಇರಲಿಲ್ಲ” ಎಂದು ಬರೆದಿದ್ದಾರೆ.

ಸೋಮವಾರ ಪ್ರಕಟಿಸಿದ ಪೋಸ್ಟಿಗೆ ಸಂಬಂಧಿಸಿದಂತೆ ಬಂದಿರುವ ಕಮೆಂಟ್ ಗಳಿಗೆ ಪ್ರತಿಕ್ರಿಯಿಸುವ ವೇಳೆ ಯಶೋಮತಿ ಈ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಾಗಿ ಇಲ್ಲಿ ಯಶೋಮತಿ ಅವರ ಎರಡು ಪೋಸ್ಟ್ ಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಮಂಗಳವಾರದ ಬರಹ:
ಪ್ರತಿಕ್ರಿಯಿಸಿದ ಎಲ್ಲರಿಗೂ ಚಿರರುಣಿ… ವಿ ಆಲ್ ಲವ್ ರವಿ…ನಮ್ಮ ಹಿಮ ಇನ್ನೂ ಚಿಕ್ಕವನಾದ್ದರಿಂದ ಹಿ ಲವ್ಸ್ ಮೋರ್ ದೆನ್ ಅಸ್, ಹೀ ನೀಡ್ಸ್ ಹಿಸ್ ಕಂಪ್ಲೀಟ್ ಲವ್. ಎರಡು ದಿನದಿಂದ ಶಾಲೆಗೆ ಹೋಗಿಲ್ಲ. ಸ್ವಲ್ಪ ಡಿಸ್ಟರ್ಬ್ ಆದಂತೆ ಕಾಣ್ತಿದ್ದಾನೆ. ಬಟ್ ಐ ಆ್ಯಮ್ ದೇರ್ ಫಾರ್ ಹಿಮ್ ಅವರೆಲ್ಲೋ ಜೋಯಿಡಾದಲ್ಲೋ, ಆಫೀಸಲ್ಲೋ, ಕರಿಶ್ಮಾ ಹಿಲ್ಸ್ ನಲ್ಲೋ ಇದ್ದಾರೆ ಅಂದ್ರೆ ನಮಗೂ ಒಂದು ರೀತಿಯ ಭರವಸೆ ಇರುತ್ತಿತು.್ತ ಅವರು ಸುರಕ್ಷಿತವಾಗಿದ್ದಾರೆಂದು. ಊಟದ ಮುಂದೆ ಕುಳಿತರೆ ಕಣ್ತುಂಬಿ ಬರುತ್ತೆ. ಧುತ್ತನೆ ಒಂದು ಅನೂಹ್ಯ ಘಟನೆ ಎದುರಾದಾಗ ಆಘಾತ, ಆತಂಕ, ಕುತೂಹಲ, ದಿಗ್ಭ್ರಮೆಗಳು ಎಲ್ಲರ ಮನದಲ್ಲಿ ಮೂಡುವುದು ಸಹಜವೇ. ಆ ಸಮಯದಲ್ಲಿ ನೀಡುವ ಪ್ರತಿಕ್ರಿಯೆಗಳು ಇನ್ನಷ್ಟು ಗೊಂದಲಗಳನ್ನುಂಟು ಮಾಡುವಂತಾಗಬಾರದು ಅಷ್ಟೆ.

ಮಾಧ್ಯಮದವರಿಗೆ ನನ್ನ ಮನವಿ. “ನಾನು ಮನೆಬಿಟ್ಟು ಓಡಿ ಹೋಗಿದ್ದೇನೆ”, “ಪೊಲೀಸರ ಮುಂದೆ ಸಿಟ್ಟಿನಿಂದ ವರ್ತಿಸಿದ್ದೇನೆ”, “ನನ್ನ ಹೇಳಿಕೆಯಿಂದಲೇ ರವಿಗೆ ಇಂದು ಈ ಗತಿ ಬಂದಿದೆ” ಎಂದೆಲ್ಲ ಇಲ್ಲಸಲ್ಲದ ಮಾತುಗಳನ್ನು ಪ್ರಸರಿಸಬೇಡಿ. ದೈಹಿಕವಾಗಿ ಅನಾರೋಗ್ಯಗೊಂಡಾಗ ಮಾನಸಿಕವಾಗಿಯೂ ಬಲಹೀನರಾಗುತ್ತಾರೆ. ಹೀಗಾಗಿ ನಮಗೆಲ್ಲ ರವಿಯ ಆರೋಗ್ಯದ ಬಗ್ಗೆಯೇ ಬಹಳವಾಗಿ ಆತಂಕವಾಗುತ್ತಿದೆ.

ಇನ್ನು ಸುನೀಲ್ ಹೆಗ್ಗರವಳ್ಳಿಯವರು ‘ಹಾಯ್ ಬೆಂಗಳೂರ್’ ಕಚೇರಿಯಲ್ಲಿ ಬಹಳ ಕಾಲದಿಂದ ಸಹೋದ್ಯೋಗಿಯಾಗಿ ದುಡಿದಿದ್ದರಿಂದ ಅದಕ್ಕಿಂತ ಹೆಚ್ಚಾಗಿ ಅವರು ಸದಾ ರವಿಯ ಒಳಿತನ್ನೇ ಬಯಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆನಷ್ಟೆ. ಅದರ ಹೊರತಾಗಿ ಮತ್ಯಾವ ಕಾರಣವೂ ಇಲ್ಲ. ಒಂದುವೇಳೆ ಅನುಮಾನಗೊಂಡು ಸುಪಾರಿ ಕೊಟ್ಟಿದ್ದರೆಂದೇ ಊಹಿಸಿಕೊಂಡಾಗ ನಾನೇನಾದರೂ ಸುನಿಲ್ ಹೆಗ್ಗರವಳ್ಳಿಯ ಸ್ಥಾನದಲ್ಲಿದ್ದಿದ್ದರೆ ಅವರ ಪರಮ ಗುರುವಾದ ರವಿಯ ಬಗ್ಗೆ ಹೀಗೆಲ್ಲ ಮಾಧ್ಯಮದಲ್ಲಿ ಅವಮಾನಕರ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ. ಇನ್ನೊಂದೆರಡು ಕೇಸುಗಳು ಜಡಿಯುವಂತೆ ಪ್ರೇರೇಪಿಸುತ್ತಿರಲಿಲ್ಲ. ಜೊತೆಗೆ ಹೆದರಿ ಪೊಲೀಸ್ ರಕ್ಷಣೆಯನ್ನು ಕೇಳುತ್ತಲೂ ಇರಲಿಲ್ಲ. “ನಿಮ್ಮ ಕೈಯಲ್ಲೇ ಪ್ರಾಣ ಹೋಗುವುದಾದರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರೇನಿದೆ. ನೀವು ನನ್ನನ್ನು ತಂದೆಯಾಗಿ, ಗುರುವಾಗಿ ಸಲಹಿದ್ದೀರಿ ಎಂದು ಅವರ ಕೈಗೆ ಬಂದೂಕನ್ನ ನಾನೇ ಕೊಡುತ್ತಿದ್ದೆ.”

ಇನ್ನು ರವಿ ದುಡಿದ ಹಣ, ಆಸ್ತಿ ಎಲ್ಲವೂ ಅವರ ಸ್ವಯಾರ್ಜಿತ. ಅದೆಲ್ಲದರ ಹಕ್ಕುದಾರರೂ ಅವರೇ. ನಾನವರನ್ನು ಪ್ರೀತಿಸಿದಾಗ ಅವರ ಮನೆ ಹಾಗೂ ಕಚೇರಿಗಳು ಬಾಡಿಗೆ ಕಟ್ಟಡಗಳಾಗಿದ್ದವು. ಅವರಿಂದ ನಾನು ಸದಾ ಬಯಸುವುದು ನಿಷ್ಕಲ್ಮಷ ಪ್ರೀತಿ ಹಾಗೂ ಅವರ ನಿರಂತರ ಸಮಾಜಮುಖಿ ಬರವಣಿಗೆ. ಹಿಮವಂತನಿಗೆ ಅಪ್ಪನ ಒಡನಾಟದ ಅಗತ್ಯವಿದೆ. ಆ ಮಗುವಿಗೆ ಅದರ ಸವಿ ಸದಾ ಸಿಗಲೆಂದು ನಿಮ್ಮೆಲ್ಲರ ಹಾರೈಕೆಯಿರಲಿ.

ಸೋಮವಾರದ ಬರಹ:
ಮೊನ್ನೆ ತಾನೇ ನಡೆದ ಹಿಮನ ಬರ್ತ್ ಡೇಯ ಫೊಟೋಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು ಸೆಲೆಕ್ಟ್ ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ…“ಯಶೂ ಮಾ ಎಲ್ಲಿದ್ದೀರ? ಒಂದು ಸ್ವಲ್ಪ ಟಿವಿ ನೋಡಿ” ಅಂದ ಕೂಡಲೇ ಅದನ್ನು ಅಲ್ಲೇ ಬಿಟ್ಟು ಟಿವಿ ಆನ್ ಮಾಡಿದವಳ ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು… ಏನಾಗ್ತಿದೆ? ನನ್ನ ಹೆಸರು ಯಾಕೆ ಬರ್ತಿದೆ ಅದೂ ನಂಗೇ ಗೊತ್ತಿಲ್ಲದೇ…. ಹಿಮ ಬೇರೆ ಸ್ಕೂಲಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ.

ರಾತ್ರಿಯಿಡೀ ಒಂದೇ ಸಮನೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳು ಕಿವಿಗೆ ಕಾದ ಸೀಸದಂತೆ ಬೀಳುತ್ತಿದ್ದವು. ಕಚೇರಿಯಲ್ಲಿ ಫೋನುಗಳೆಲ್ಲ ಪೊಲೀಸರ ವಶದಲ್ಲಿದ್ದವು. ಹಾಗಾಗಿ ಎಲ್ಲಿಂದಲೂ ಉತ್ತರ ಸಿಗುತ್ತಿಲ್ಲ. ಸರಿ ಆದದ್ದಾಗಲಿ ನೋಡೋಣ ಭಗವಂತನೊಬ್ಬನಿದ್ದಾನೆ ಅಂದು ಧೈರ್ಯವಾಗಿ ಕುಳಿತವಳಿಗೆ ಅಮ್ಮ, ತಂಗಿ, ಅಣ್ಣನ ಮಗನ ಜೊತೆಗೆ ಗೆಳತಿಯರ ಧೈರ್ಯ ತುಂಬುವ ಮೆಸೇಜುಗಳು ಜೊತೆಯಾದವು.

ಅಮ್ಮಾ ಯಾವುದಕ್ಕೂ ಹೆದರಿಕೊಳ್ಳಬೇಡ. ಏನೇ ಬಂದ್ರೂ ಧೈರ್ಯವಾಗಿ ಫೇಸ್ ಮಾಡು…. ಅಂದ ಹಿಮ. ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ..

“ಏನೂ ಯೋಚನೆ ಮಾಡಬೇಡ ನಂಗೇನೂ ಆಗಲ್ಲ” ಅಂತ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು ಹಿಮ. ನಿಮಗೇನೂ ಆಗಲ್ಲ ವೀ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ. ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

Advertisement
Advertisement