ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರಕ್ಕೀಗ ಚಿತ್ರೀಕರಣ ನಡೆಯುತ್ತಿದೆ. ಈ ಹೊತ್ತಿನಲ್ಲಿಯೇ ಈ ಸಿನಿಮಾದ ತಾರಾಗಣಕ್ಕೆ ಕಲಾವಿದರ ಸೇರ್ಪಡೆ ಕಾರ್ಯವೂ ಸುಸೂತ್ರವಾಗಿಯೇ ನಡೆಯುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿಯೂ ಪ್ರಧಾನ ಆಕರ್ಷಣೆಯಾಗಿದ್ದದ್ದು ತಾರಾಗಣವೇ. ಈ ಬಾರಿಯೂ ವಿಶೇಷವಾದ ಪಾತ್ರಗಳಿಗೆ ಅದಕ್ಕೆ ತಕ್ಕುದಾದ ಕಲಾವಿದರನ್ನೇ ಆಯ್ಕೆ ಮಾಡಲು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ.
ಕೆಜಿಎಫ್ 2 ತಾರಾಗಣ ಸೇರಿಕೊಂಡವರಲ್ಲಿ ಬಾಲಿವುಡ್‍ನ ಖ್ಯಾತ ನಟಿ ರವೀನಾ ಟಂಡನ್ ಕೂಡಾ ಸೇರಿಕೊಂಡಿರೋದು ಗೊತ್ತೇ ಇದೆ. ಈ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ರವೀನಾ ಪಾತ್ರ ಹೇಗಿರಬಹುದೆಂಬ ಕ್ಯೂರಿಯಾಸಿಟಿಯೂ ಶುರುವಾಗಿತ್ತು. ಇದೀಗ ರವೀನಾ ಪಾತ್ರದ ಬಗ್ಗೆ ಚಿತ್ರತಂಡದ ಕಡೆಯಿಂದ ಒಂದಿಷ್ಟು ಮಾಹಿತಿ ಹೊರ ಬಿದ್ದಿದೆ. ಅವರಿಲ್ಲಿ ಪ್ರಧಾನ ಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ!
ರವೀನಾ ಇಲ್ಲಿ ಎಪ್ಪತ್ತರ ದಶಕದ ಆಚೀಚಿನ ಪ್ರಧಾನ ಮಂತ್ರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮೊದಲ ಭಾಗದಲ್ಲಿ ಈ ಪಾತ್ರದ ಬಗ್ಗೆ ಒಂದು ಸುಳಿವು ನೀಡಲಾಗಿತ್ತಷ್ಟೇ. ಈ ಪಾತ್ರದ ಬಗ್ಗೆ ರವೀನಾ ಕೂಡಾ ಖುಷಿಗೊಂಡಿದ್ದಾರೆಂಬ ಮಾಹಿತಿ ಇದ್ದು ಈ ವಿಚರವಾಗಿ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಮೂಲಕ ದಶಕಗಳ ನಂತರ ರವೀನಾ ಕನ್ನಡಕ್ಕೆ ಮತ್ತೆ ಮರಳಿದಂತಾಗುತ್ತದೆ. ತೊಂಭತ್ತರ ದಶಕದಲ್ಲಿ ಉಪೇಂದ್ರ ಚಿತ್ರದಲ್ಲಿ ರವೀನಾ ಉಪ್ಪಿಗೆ ಜೋಡಿಯಾಗಿ ನಟಿಸಿದ್ದರು.
ಇನ್ನುಳಿದಂತೆ ಈಗಾಗಲೇ ಭಾರೀ ಗೆಲುವಿನ ರೂವಾರಿಯಾಗಿರೋ ಕೆಜಿಎಫ್ ಚಿತ್ರಕ್ಕೂ ರವೀನಾ ಅವರಿಗೂ ಕನೆಕ್ಷನ್ನುಗಳಿವೆ. ಈ ಚಿತ್ರವನ್ನು ರವೀನಾ ಮೆಚ್ಚಿ ಕೊಂಡಾಡಿದ್ದರು. ಇದಲ್ಲದೇ ಬಾಲಿವುಡ್ಡಿನಲ್ಲಿ ಕೆಜಿಎಫ್ ಚಿತ್ರದ ವಿತರಣಾ ಹಕ್ಕು ಪಡೆದಿದ್ದದ್ದು ರವೀನಾ ಪತಿ ಅನಿಲ್ ತಡಾನಿಯವರೇ. ಇದೀಗ ಅವರು ಕೆಜಿಎಫ್ ಚಾಪ್ಟರ್ 2ನ ಭಾಗವಾಗೋ ಕ್ಷಣಗಳು ಹತ್ತಿರಾದಂತಿದೆ.