ನವದೆಹಲಿ: ಕೆಜಿಎಫ್-2 ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರವೀನಾ ಟಂಡನ್, ತಮ್ಮ ವಿವಿಧ ಕೆಲಸಗಳ ಮೂಲಕ ಸಹ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಸಹಾಯ ಹಸ್ತ ಚಾಚಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಟಿ ರವೀನಾ ಟಂಡನ್ ಲಾಕ್‍ಡೌನ್ ದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಮೊಮ್ಮಕ್ಕಳೊಂದಿಗೆ ಆಟವಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ. ರವೀನಾ ತಮ್ಮ ಚಟುವಟಿಕೆಗಳ ಕುರಿತು ಆಗಾಗ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ತಾವು ಮೊಮ್ಮಗನೊಂದಿಗೆ ಕಾಲ ಕಳೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.
ಹೀಗೆ ಕುಟುಂಬದೊಂದಿಗೆ ಕಾಲ ಕಳೆಯುವುದರ ಜೊತೆಗೆ ಸದ್ದಿಲ್ಲದೆ ಸಹಾಯವನ್ನೂ ಮಾಡುತ್ತಿದ್ದು, ಈ ಕುರಿತ ಮಾಹಿತಿ ಇದೀಗ ಬಹಿರಂಗವಾಗಿದೆ. ಹೌದು ರವೀನಾ ಅನ್ನದಾನಕ್ಕೆ ಸಹಾಯ ಮಾಡಿದ್ದು, ಇಸ್ಕಾನ್‍ನ ಅಕ್ಷಯ ಪಾತ್ರೆ ಮೂಲಕ ನೆರವಾಗಿದ್ದಾರೆ. ಅಕ್ಷಯ ಪಾತ್ರೆ ಸಂಸ್ಥೆ ಟ್ವೀಟ್ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದೆ.
Very pleased to share, Ms. Raveena Tandon has contributed to our COVID-19 relief effort. Her generosity will help us facilitate cooked meals to needful people across India.
Thank you, @TandonRaveena, we really appreciate your kind support.????????
— Akshaya Patra Official (@AkshayaPatra) April 17, 2020
ಕೊರೊನಾ ವೈರಸ್ ವಿರುದ್ಧ ಹೋರಾಡುವ ನಮ್ಮ ಪ್ರಯತ್ನಕ್ಕೆ ರವೀನಾ ಟಂಡನ್ ಸಹಾಯ ಮಾಡಿದ್ದಾರೆ, ಅವರ ಈ ಔದಾರ್ಯವು ಅಗತ್ಯವಿರುವ ಜನರಿಗೆ ಊಟ ನೀಡಲು ಸಹಕಾರಿಯಾಗಲಿದೆ. ಥ್ಯಾಂಕ್ಯೂ ರವೀನಾ ಟಂಡನ್, ನಿಮ್ಮ ಈ ಬೆಂಬಲವನ್ನು ನಿಜವಾಗಿಯೂ ನಾವು ಪ್ರೋತ್ಸಾಹಿಸುತ್ತೇವೆ ಎಂದು ಅಕ್ಷಯ ಪಾತ್ರೆ ಸಂಸ್ಥೆಯ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರವೀನಾ, ಕೇವಲ ನಮಸ್ಕರಿಸಿದ ಎಮೋಜಿಯನ್ನು ಹಾಕಿದ್ದಾರೆ.
???????? https://t.co/64nz1iL9mF
— Raveena Tandon (@TandonRaveena) April 17, 2020
ಕೊರೊನಾ ವಿರುದ್ಧದ ಹೋರಾಟಕ್ಕೆ ಇಡೀ ಭಾರತದ ಚಿತ್ರರಂಗವೇ ಒಂದಾಗಿದ್ದು, ಬಹುತೇಕ ನಟ, ನಟಿಯರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಹಣ, ಆಹಾರ, ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ರೀತಿಯಲ್ಲಿ ತಮ್ಮದೇಯಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಇದೀಗ ರವೀನಾ ಟಂಡನ್ ಅಕ್ಷಯ ಪಾತ್ರೆ ಸಂಸ್ಥೆ ಮೂಲಕ ಸಹಾಯ ಮಾಡಿದ್ದಾರೆ.
ಅಕ್ಷಯ ಪಾತ್ರೆ ಸಂಸ್ಥೆ ಇದನ್ನು ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಳ್ಳೆಯ ಬೆಳವಣಿಗೆ ಎಂದು ಹಾಡಿ ಹೊಗಳಿದ್ದಾರೆ. ಸಹಾಯ ಮಾಡುವುದರಲ್ಲಿ ರವೀನಾ ಟಂಡನ್ ಇತರರಿಗಿಂತ ಮುಂದು. ಒಳ್ಳೆಯ ಉದ್ದೇಶಗಳಿಗೆ ಯಾವಾಗಲೂ ಸಹಾಯ ಮಾಡುವ ನಿಮಗೆ, ದೇವರು ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತಿದ್ದಾರೆ.
ರವೀನಾ ಟಂಡನ್ ಅವರು ಕೆಜಿಎಫ್-2 ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇದೀಗ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊಮ್ಮಕ್ಕಳೊಂದಿಗೆ ಆಡವಾಡುತ್ತಿದ್ದಾರೆ.