– ಕಾಡಿನಲ್ಲೇ ಅವಿತಿದ್ದ 30ಕ್ಕೂ ಹೆಚ್ಚು ಜನ
ಬೆಂಗಳೂರು: ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬರೋಬ್ಬರಿ 35 ಜನರನ್ನು ಬಂಧಿಸಿದ್ದಾರೆ.
ನಗರದ ಹೊರವಲಯದ ಆನೇಕಲ್ ಬಳಿ ನಡೆದ ರೇವ್ ಪಾರ್ಟಿ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ತಪ್ಪಿಸಿಕೊಳ್ಳುತ್ತಿದ್ದ ಯುವಕರನ್ನು ಅಟ್ಟಾಡಿಸಿ ಹಿಡಿದಿದ್ದಾರೆ. ಬರೋಬ್ಬರಿ 35 ಜನರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಪೊಲೀಸರು ಪಾರ್ಟಿ ನಡೆಯುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಯುತ್ತಿದ್ದಂತೆ ಇವರೆಲ್ಲರೂ ಕಾಡಿನಲ್ಲಿಯೇ ಅವಿತಿದ್ದರು. ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಹುತೇಕರನ್ನು ಹೆಡೆಮುರಿ ಕಟ್ಟಿದ್ದಾರೆ.
ಆಶಿಸ್ ಗೌಡ ಪ್ರಕರಣದ ಕಿಂಗ್ ಪಿನ್ ಆಗಿದ್ದು, ಸರ್ವೇಶ್ ಕುಮಾರ್ ಅಲಿಯಾಸ್ ಉಗ್ರ ಪಾರ್ಟಿಯ ಪ್ರಮುಖ ಆಯೋಜಕನಾಗಿದ್ದಾನೆ. ಸರ್ವೇಶ್ ಕುಮಾರ್ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಸರ್ವೇಶ್ ಅಣತಿಯಂತೆ ಆಶಿಸ್ ಗೌಡ ಪಾರ್ಟಿಗೆ ಜನರನ್ನು ಕರೆತರುತ್ತಿದ್ದ. ಇದೀಗ ಇವರಿಬ್ಬರು ಸೇರಿದಂತೆ ಒಟ್ಟು 35 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆ
ಇದರಲ್ಲಿ ಬಹುತೇಕರು ಕೇರಳ ಮೂಲದವರು. ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಎಂದು ತಿಳಿದು ಬಂದಿದೆ. 30ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ದಾಳಿ ಮಾಡುತ್ತಿದ್ದಂತೆ ಬಹುತೇಕ ಜನ ತಪ್ಪಿಸಿಕೊಂಡಿದ್ದರು. ಅಲ್ಲರಿಗೂ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಬ್ಲಡ್, ಯೂರಿನ್ ಹಾಗೂ ಹೇರ್ ಫಾಲಿಕಲ್ ಟೆಸ್ಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರೆಸ್ಟ್ ಆದವರಲ್ಲಿ ಬಹುತೇಕರು ಕೇರಳದವರು ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್
ಪೊಲೀಸರು ಈಗಾಗಲೇ ಯುವಕ, ಯುವತಿಯರ 6 ಕಾರು ಸೇರಿದಂತೆ 15ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ರೆಸಾರ್ಟ್ ನ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಿ, ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಸೇವಿಸಿ ಹುಚ್ಚೆದ್ದು ಕುಣಿದಿದ್ದಾರೆ. ಅರ್ಧಂಬಂರ್ಧ ಬಟ್ಟೆ ಹಾಕಿದ್ದ ಯುವಕ, ಯುವತಿಯರು ಡ್ರಗ್ಸ್ ನಶೆಯಲ್ಲಿ ತೇಲಿದ್ದರು. ಇದೀಗ ಪೊಲೀಸರು ಎಲ್ಲರ ಹೆಡೆಮುರಿ ಕಟ್ಟಿದ್ದಾರೆ.