ಥ್ರಿಲ್ಲರ್ ಅನುಭವ ನೀಡುವ ರೋಚಕ ರತ್ನಮಂಜರಿ!

Public TV
2 Min Read
ratnamanjari 5

ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅಪ್ಪಟ ಸಿನಿಮಾ ಪ್ರೇಮದಿಂದ ರೂಪಿಸಿರುವ ಚಿತ್ರ ರತ್ನಮಂಜರಿ. ರಾಜ್ ಚರಣ್ ನಾಯಕನಾಗಿ ನಟಿರೋ ಈ ಚಿತ್ರದ ಬಗ್ಗೆ ಆರಂಭದಿಂದಲೂ ಕುತೂಹಲವಿತ್ತು. ಅದಕ್ಕೆ ತಕ್ಕುದಾದ ರೋಚಕ ವಿಚಾರಗಳೇ ಚಿತ್ರತಂಡದ ಕಡೆಯಿಂದ ಹೊರ ಬೀಳುತ್ತಾ ಸಾಗಿ ಬಂದಿತ್ತು. ಇದೀಗ ಈ ಚಿತ್ರ ತೆರೆ ಕಂಡಿದೆ. ವಿಶಿಷ್ಟವಾದ ಕಥೆ, ವಿಭಿನ್ನ ನಿರೂಪಣೆ, ಎದೆ ಝಲ್ಲೆನ್ನಿಸುವಂಥಾ, ಕಣ್ಣಿಗೆ ಹಬ್ಬದಂಥಾ ದೃಷ್ಯ ಶ್ರೀಮಂತಿಕೆಯಿಂದ ಪ್ರೇಕ್ಷಕರ ಮನಸು ತಾಕಿದೆ.

ratnamanjari B

ಪ್ರಸಿದ್ಧ್ ನಿರ್ದೇಶನದ ಚೊಚ್ಚಲ ಚಿತ್ರವಾದ ರತ್ನಮಂಜರಿಯನ್ನು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಾದ ಸಂದೀಪ್, ನಟರಾಜ್ ಹಳೇಬೀಡು ಮತ್ತು ಸಂದೀಪ್ ಹಳೇಬೀಡು ನಿರ್ಮಾಣ ಮಾಡಿದ್ದಾರೆ. ಪ್ರೇಮಸಲ್ಲಾಪದೊಂದಿಗೇ ವಿದೇಶದಲ್ಲಿ ತೆರೆದುಕೊಂಡು, ಅಲ್ಲಿನ ಕಾರ್ಪೋರೇಟ್ ಕಾರಿಡಾರುಗಳ ತುಂಬಾ ಅಡ್ಡಾಡಿ, ಒಂದು ನಿಗೂಢ ಕೊಲೆಯ ಚುಂಗು ಹಿಡಿದು ಸೀದಾ ಕೊಡಗಿನ ಪಥದತ್ತ ಹೊರಳಿಕೊಳ್ಳೋ ಕಥೆ ಪಕ್ಕಾ ಕಮರ್ಷಿಯಲ್ ಪಟ್ಟುಗಳೊಂದಿಗೆ ಎಲ್ಲರ ಗಮನ ಸೆಳೆಯುವಂತೆ ಮೂಡಿ ಬಂದಿದೆ.

ratnamanjari A

ರಾಜ್ ಚರಣ್ ನಾಯಕನಾಗಿ ಸಿದ್ಧಾರ್ಥ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿದ್ಧಾರ್ಥ್ ಎಳವೆಯಿಂದಲೂ ಸೂಕ್ಷ್ಮ ಸ್ವಭಾವದ ಹುಡುಗ. ಬೆಳೆದು ದೊಡ್ಡವನಾದ ನಂತರವೂ ಅದೇ ಮನಸ್ಥಿತಿ ಹೊಂದಿರೋ ಆತ ಅಮೆರಿಕಾದಲ್ಲಿ ಸಸ್ಯಶಾಸ್ತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಅವನ ಮನೆ ಪಕ್ಕದಲ್ಲಿಯೇ ಕೊಡಗು ಮೂಲದ ದಂಪತಿಯೂ ವಾಸವಾಗಿರುತ್ತಾರೆ. ಆದರೆ ಅದೊಂದು ದಿನ ಆ ದಂಪತಿ ಕೊಲೆಯಾಗಿ ಬಿಡುತ್ತಾರೆ. ಸಸ್ಯಶಾಸ್ತ್ರಜ್ಞ ನಾಯಕ ಈ ಕೊಲೆಯ ಬೆಂಬಿದ್ದು ಕೊಡಗಿಗೆ ಬಂದಿಳಿಯೋ ಮೂಲಕ ಅಲ್ಲಿ ಕಥೆಯ ಓಟ ಆರಂಭವಾಗುತ್ತೆ. ಆ ನಂತರದ ಜರ್ನಿಯ ಪ್ರತಿ ತಿರುವುಗಳೂ ಕೂಡಾ ರೋಚಕ ಅನುಭವವನ್ನೇ ನೋಡುಗರಿಗೆ ದಾಟಿಸುತ್ತದೆ.

ಅಮೆರಿಕದಲ್ಲಿ ಕೊಲೆಯಾದ ನಾಣಯ್ಯ ಒಡೆತನದ ರತ್ನಮಂಜರಿ ಎಂಬ ಎಸ್ಟೇಟಿನ ನಿಗೂಢದ ಸುತ್ತ ಕಥೆ ರೋಚಕವಾಗಿ ಚಲಿಸುತ್ತದೆ. ಆ ವಾತಾವರಣದ ಇಂಚಿಂಚು ಸೌಂದರ್ಯವನ್ನೂ ಪ್ರೀತಂ ತೆಗ್ಗಿನಮನೆ ತಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿಸಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಅಂಥಾ ಪ್ರಾಕೃತಿಕ ಸೌಂದರ್ಯದ ನಡುವೆಯೂ ಪ್ರೇಕ್ಷಕರು ಬೆಚ್ಚಿ ಬೀಳುವಂಥಾ ಆವೇಗದೊಂದಿಗೆ ದೃಶ್ಯ ಕಟ್ಟಿದ್ದಾರೆ. ಒಟ್ಟಾರೆಯಾಗಿ ಅಮೆರಿಕಾದಲ್ಲಿ ನಾಣಯ್ಯ ದಂಪತಿ ಕೊಲೆಯಾಗಲು ಕಾರಣವೇನು ಅನ್ನೋದರಿಂದ ಮೊದಲ್ಗೊಂಡು ರೋಚಕ ಕಥನವೇ ಈ ಚಿತ್ರದಲ್ಲಿದೆ.

Ratnamanjarii

ನಿರ್ದೇಶಕ ಪ್ರಸಿದ್ಧ್ ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ. ನಾಯಕ ರಾಜ್ ಚರಣ್ ಕೂಡಾ ನಾಯಕನಾಗಿ ನೆಲೆಗೊಳ್ಳೋ ಲಕ್ಷಣಗಳನ್ನು ನಟನೆಯ ಮೂಲಕ ಹೊಮ್ಮಿಸಿದ್ದಾರೆ. ಅಖಿಲಾ ಪ್ರಕಾಶ್ ಮುದ್ದಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಇನ್ನುಳಿದಂತೆ ಈಗಾಗಲೇ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿರುವ ಪಲ್ಲವಿ ರಾಜು ಕೂಡಾ ಚೆಂದಗೆ ನಟಿಸಿದ್ದಾರೆ. ವಿದೇಶದ ಕಾರ್ಪೋರೇಟ್ ಜಗತ್ತಿನಲ್ಲಿ ಸುತ್ತಾಡಿಸಿ ಕೊಡಗಿನ ನಿಗೂಢದಲ್ಲಿ ಕಥೆ ಸಾಗುವ ಈ ಚಿತ್ರ ಪ್ರತಿ ವರ್ಗದ ಪ್ರೇಕ್ಷಕರಿಗೂ ಮಜವಾದ ಅನುಭವ ನೀಡುವಂತೆ ಮೂಡಿ ಬಂದಿದೆ.

ರೇಟಿಂಗ್: 4/5

Ratnamanjarii 1

Share This Article
Leave a Comment

Leave a Reply

Your email address will not be published. Required fields are marked *