ಯಾದಗಿರಿ: ಜಿಲ್ಲೆಯ ಶಹಾಪುರದಲ್ಲಿ (Shahapur) 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ (Ration Rice Theft Case) ದೊಡ್ಡ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಅಧಿಕಾರಿಯೇ ಇದೀಗ ಆರೋಪಿಯಾಗಿದ್ದು, ಪೊಲೀಸರ ತನಿಖೆಯಲ್ಲಿ ಭಯಾನಕ ಸತ್ಯ ಬಟಾಬಯಲಾಗಿದೆ.
ನವೆಂಬರ್ 22 ರಂದು ಯಾದಗಿರಿ (Yadagiri) ಜಿಲ್ಲೆಯ ಶಹಾಪುರದ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ 66 ಲಕ್ಷ ರೂ. ಮೌಲ್ಯದ ಬರೋಬ್ಬರಿ 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನವಾಗಿತ್ತು. ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ದೂರನ್ನೂ ನೀಡಿದ್ದ. ಆದರೆ ಇದೀಗ ಇಡೀ ಘಟನೆಯ ಅಸಲಿಯತ್ತು ಬಯಲಾಗಿದ್ದು, ದೂರು ನೀಡಿದ್ದ ಉಪನಿರ್ದೇಶಕ ಭೀಮರಾಯ ಮಸಾಲಿಯೂ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
- Advertisement 2-
- Advertisement 3-
ಶಹಾಪುರ ಪೊಲೀಸರು ಬಂಧಿತ ಆರೋಪಿಗಳ ಬೆಂಡೆತ್ತಿದಾಗ ಅಸಲಿ ಸತ್ಯ ಕಕ್ಕಿದ್ದಾರೆ. ಕಳ್ಳತನ ಆಗುತ್ತಿದ್ದ ಅಕ್ಕಿ ಮಾರಾಟದಿಂದ ಬರುವ ಆದಾಯದಲ್ಲಿ ಬಂಧಿತ ಆರೋಪಿಗಳು ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕನಿಗೂ ಭರ್ಜರಿ ಪಾಲು ಕೊಡುತ್ತಿದ್ದರು. ಹಾಲಿ ಇರುವ ಭೀಮರಾಯ ಮಸಾಲಿ ಹಾಗೂ ಈ ಹಿಂದಿನ ಡಿಡಿ ಪ್ರಭು ದೊರೆಗೆ ಪ್ರತಿ ತಿಂಗಳು 50 ಸಾವಿರ ರೂ. ಮಾಮೂಲಿ ತಲುಪುತ್ತಿತ್ತು. ಡಿಡಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮಲ್ಲೇಶ ಮೂಲಕ ಹಣ ಕೊಡಲಾಗುತ್ತಿತ್ತು ಅನ್ನೋ ಕಟು ಸತ್ಯ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!
- Advertisement 4-
ಸ್ವತಃ ಇಲಾಖೆಯ ಅಧಿಕಾರಿಗಳ ಕಣ್ಗಾವಲಿನಲ್ಲೇ ಅಕ್ರಮ ದಂಧೆ ನಡೆಯುತ್ತಿತ್ತು ಅನ್ನೋದನ್ನು ಮೊದಲ ದಿನವೇ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಅದರಂತೆ ಇದೀಗ ಸತ್ಯ ಹೊರ ಬಿದ್ದಿದ್ದು, ಅಧಿಕಾರಿಗಳಿಗೆ ಪ್ರತಿ ತಿಂಗಳು ಕಪ್ಪ ಕೊಟ್ಟು ದಂಧೆಕೋರರು ದಂಧೆ ನಡೆಸುತ್ತಿದ್ದರು. ಇಲ್ಲಿ ಕೇವಲ ಆಹಾರ ನಾಗರಿಕ ಸರಬರಾಜು ಇಲಾಖೆ ಡಿಡಿ ಮಾತ್ರವಲ್ಲದೇ ಫುಡ್ ಇನ್ಸ್‌ಪೆಕ್ಟರ್‌ಗಳು ಹಾಗೂ ಶಿರಸ್ತೇದಾರರೂ ಇದರಲ್ಲಿ ಪಾಲುದಾರರೇ ಆಗಿದ್ದಾರೆ. ದಂಧೆಗೆ ಸಹಕಾರ ನೀಡಿದ್ದಕ್ಕೆ ಫುಡ್ ಇನ್ಸ್‌ಪೆಕ್ಟರ್‌ಗಳಿಗೆ ಪ್ರತಿ ತಿಂಗಳು 20 ಸಾವಿರ ರೂ. ಕೊಟ್ಟರೆ ಇತ್ತ ಶಿರಸ್ತೆದಾರರಿಗೆ ಪ್ರತಿ ತಿಂಗಳು 10 ಸಾವಿರ ರೂ.ಯನ್ನು ಫೋನ್ ಪೇ ಮೂಲಕ ನೀಡಲಾಗುತ್ತಿತ್ತು. ಪ್ರಕರಣದಲ್ಲಿ ಬಂಧಿತನಾಗಿರೋ ಎ1 ಆರೋಪಿ ಶಿವಯ್ಯನಿಂದಲೇ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಫಿಡ್ ಇನ್ಸ್‌ಪೆಕ್ಟರ್‌ಗಳು ಹಾಗೂ ಶಿರಸ್ತೆದಾರರಿಗೆ ಹೋಗಬೇಕಿದ್ದ ಹಣ ಗುರುಪಾದಯ್ಯ ಹಿರೇಮಠ ಅನ್ನೋರ ಅಕೌಂಟ್‌ಗೆ ವರ್ಗಾವಣೆ ಮಾಡಲಾಗುತ್ತಿತ್ತು. 2 ವರ್ಷಗಳಲ್ಲಿ ಬರೋಬ್ಬರಿ 12 ಲಕ್ಷ 12 ಸಾವಿರ ರೂ. ಹಣ ವರ್ಗಾವಣೆ ಆಗಿರುವ ಸತ್ಯ ಹೊರಬಿದ್ದಿದೆ.
ಈಗಾಗಲೇ 6 ಆರೋಪಿಗಳು ಬಂಧನ ಆಗಿರೋ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಬೇಲಿನೇ ಎದ್ದು ಹೊಲ ಮೇಯ್ದಂತಾಗಿದೆ. ಬಡ ಜನರಿಗೆ ಅನ್ನಭಾಗ್ಯ ಅಕ್ಕಿ ಕೊಡುವಲ್ಲಿ ಲೋಪ ಆದರೆ ಕ್ರಮ ಕೈಗೊಳ್ಳಬೇಕಿದ್ದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೇ ಭಾಗಿಯಾಗಿರೋದು ನೋಡಿದರೆ ವ್ಯವಸ್ಥೆ ಬಗ್ಗೆಯೇ ಅಸಹ್ಯ ಹುಟ್ಟುವಂತೆ ಮಾಡಿದೆ. ಹೀಗಾಗಿ ಕೂಡಲೇ ಪೊಲೀಸರು ತಪ್ಪಿತಸ್ಥ ಆರೋಪಿಗಳನ್ನು ಹೆಡೆಮುರಿ ಕಟ್ಟೋ ಕೆಲಸ ಮಾಡಬೇಕಿದೆ. ಇದನ್ನೂ ಓದಿ: ವಿಶಿಷ್ಟ ರೀತಿಯಲ್ಲಿ ಹಸೆಮಣೆ ಏರಿದ ಯೋಧ – ಹುತಾತ್ಮ ಸೈನಿಕರ ಪತ್ನಿಯರು, ನಿವೃತ್ತ ಯೋಧರಿಗೆ ಮಂಟಪದಲ್ಲೇ ಸನ್ಮಾನ