ಮಡಿಕೇರಿ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarakonda) ಮದುವೆಗೆ ಕ್ಷಣಗಣನೆ ಆರಂಭಗೊಂಡಿದ್ದು ವಿರಾಜಪೇಟೆಯಲ್ಲಿರುವ ಮನೆ ಶೃಂಗಾರಗೊಂಡಿದೆ.
ರಶ್ಮಿಕಾ ಮಂದಣ್ಣ ಮೂಲತಃ ವಿರಾಜಪೇಟೆ ಸಮೀಪದ ಕದನೂರು ಗ್ರಾಮದವರು. ರಶ್ಮಿಕಾ ಅವರ ಪೋಷಕರು ಇಂದಿಗೂ ಅಲ್ಲಿಯೇ ವಾಸವಿದ್ದಾರೆ. ಮದುವೆ (Marriage) ಹಿನ್ನೆಲೆಯಲ್ಲಿ ಮೂಲ ಮನೆಯನ್ನು ಸಿಂಗರಿಸಲಾಗಿದೆ. ಮನೆಯ ಮುಂದೆ ಚಪ್ಪರ ಹಾಕಲಾಗಿದ್ದು, ಮನೆಯ ಬಾಗಿಲನ್ನು ಹೂವಿನಿಂದ ಅಲಂಕರಿಸಲಾಗಿದೆ.
ಹತ್ತು ದಿನಗಳ ಹಿಂದೆಯೇ ರಶ್ಮಿಕಾ ಪೋಷಕರು ಮತ್ತು ಬಂಧು ಮಿತ್ರರು ಮದುವೆ ಸಮಾರಂಭದಲ್ಲಿ ಭಾಗಿಯಾಗಲು ರಾಜಸ್ಥಾನದ ಉದಯಪುರಕ್ಕೆ (Udaypur) ತೆರಳಿದ್ದಾರೆ. ಮನೆಯಲ್ಲಿ ಈಗ ಯಾರೂ ಇಲ್ಲದಿದ್ದರೂ ಮನೆಯನ್ನು ನೋಡಿಕೊಳ್ಳುತ್ತಿರುವ ಸರೋಜಮ್ಮ ಅವರು ತಾವು ಎತ್ತಿ ಬೆಳೆಸಿದ ಮಗಳು ಬೇರೆ ಅವರ ಮನೆಗೆ ದೀಪವನ್ನು ಬೆಳಗಲು ತೆರಳುತ್ತಿದ್ದಾಳೆ ಎಂದು ಹೇಳಿ ಚಪ್ಪರ ಶಾಸ್ತ್ರವನ್ನು ಮುಗಿಸಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸರೋಜಮ್ಮ ರಶ್ಮಿಕಾ ಅವರ ಕುಟುಂಬದ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮಗಳು ರಶ್ಮಿಕಾ ಮದುವೆ ಅಗುತ್ತಿರುವುದು ತುಂಬಾ ಖುಷಿ ಅಗುತ್ತಿದೆ.ಕಳೆದ ಕೆಲ ದಿನಗಳ ಹಿಂದೆ ಅವರು ಬಂದ ಸಂದರ್ಭದಲ್ಲಿ ಮೈಸೂರಿನವರೆಗೆ ಹೋಗಿ ಬಿಟ್ಟು ಬಂದಿದ್ದೆ. ಕೊಡಗಿನ ಜನರಿಗೆ ಬಂದು ಮಿತ್ರರಿಗೆ ವಿಶೇಷವಾಗಿ ಔತಣಕೂಟವನ್ನು ಏಪ್ರಿಲ್ ತಿಂಗಳ ಏರ್ಪಡಿಸಲು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಮಗಳು ಅಳಿಯನನ್ನು ನೋಡಲು ತಾನು ಕೂಡ ಕಾತುರದಿಂದ ಕಾಯುತ್ತಿದೇನೆ ಎಂದು ತಿಳಿಸಿದರು.

