ಬೆಂಗಳೂರು: ಯಶ್ ಸರ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ನನ್ನಿಂದ ಆಗಿರುವ ತಪ್ಪಿಗೆ ಕ್ಷಮೆಯನ್ನು ಕೋರುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಯಶ್ ಅಭಿಮಾನಿಗಳ ಟೀಕೆಗೆ ಸಂಬಂಧಿಸಿದಂತೆ ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ ರಶ್ಮಿಕಾ ಅವರು ಸಂದರ್ಶನ ನೀಡಿದ ಸಂದರ್ಭವನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ನಾನು ಹೇಳಿದ ಮಾತಿನಿಂದ ಬೇಸರವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಬರೆದಿದ್ದಾರೆ.
ಫೇಸ್‍ಬುಕ್‍ನಲ್ಲಿ ರಶ್ಮಿಕಾ ಬರೆದಿದ್ದು ಹೀಗೆ:
ಟಾಕ್ ಶೋಗೆ ಸಂಬಂಧಪಟ್ಟಂತೆ ನಡೆದ ವಿದ್ಯಮಾನಗಳು ನನಗೆ ಬೇಸರವನ್ನು ಉಂಟು ಮಾಡಿದೆ. ಇದು 7 ತಿಂಗಳ ಹಿಂದೆ ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆಗೂ ಮೊದಲೇ ನಡೆದ ಟಾಕ್ ಶೋ ಆಗಿದ್ದು ಈಗ ಪ್ರಸಾರವಾಗಿದೆ.
ಯಶ್ ಸರ್ ಅವರಿಗೆ ನಾನು ತುಂಬಾ ಗೌರವ ನೀಡುತ್ತೇನೆ. ಅಷ್ಟೇ ಅಲ್ಲದೇ ಎಲ್ಲರಿಗೂ ನಾನು ಗೌರವ ನೀಡುತ್ತೇನೆ. ಈ ಹಿಂದೆ ಬಹಳಷ್ಟು ಸಂದರ್ಭದಲ್ಲಿ ನಾನು ಯಶ್ ಅವರ ಪ್ರತಿಭೆಯ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದ್ದೇನೆ. ಅವರ ಸಾಧನೆ ನನಗೂ ಸೇರಿದಂತೆ ಬಹಳಷ್ಟು ಮಂದಿಗೆ ಪ್ರೇರಣೆಯಾಗಿದೆ. ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾವನ್ನು ನಾನು ಹೊಗಳಿ ಮಾತನಾಡಿದ್ದೇನೆ. ಆದರೆ ಬೇಸರದ ಸಂಗತಿ ಏನೆಂದರೆ ಮಾಧ್ಯಮ ಆ ಭಾಗವನ್ನು ಪ್ರಸಾರ ಮಾಡಲಿಲ್ಲ. ಗಂಭೀರವಾದ ವಿಚಾರವನ್ನು ಬಿಟ್ಟು ಸಂಬಂಧಪಡದ ಎರಡು ವಾಕ್ಯಗಳ ವಿಡಿಯೋ ಪ್ರಸಾರವಾಗಿದೆ. ಹೀಗಾಗಿ ಪೂರ್ಣ ಭಾಗ ಪ್ರಸಾರ ಆಗದೇ ಕತ್ತರಿ ಹಾಕಿದ ಪರಿಣಾಮ ಈ ವಿವಾದ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಆ ರೀತಿಯಾಗಿ ನಾನು ಸ್ಟೇಟ್‍ಮೆಂಟ್ ನೀಡಿಲ್ಲ. ಅದು Rapid ಫೈರ್ ಸುತ್ತು ಗೇಮ್ ಆಗಿತ್ತು. ಈ ನನ್ನ ಹೇಳಿಕೆಯಿಂದ ನಿಮಗೆ ಬೇಸರವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ. ಅಷ್ಟೇ ಅಲ್ಲದೇ ನಾನು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನಾನು ಯಶ್ ಸರ್ ಅವರನ್ನು ಹೊಗಳಿದ್ದೇನೆ. ಫೇಸ್‍ಬುಕ್ ಲೈವ್ ನಲ್ಲೂ ನಾನು ಅವರನ್ನು ಹೊಗಳಿ ಮಾತನಾಡಿದ್ದೇನೆ. ಅಷ್ಟೇ ಅಲ್ಲದೇ ಯಶ್ ಸರ್ ಜೊತೆ ಕೆಲಸ ಮಾಡುವುದಕ್ಕೆ ನಾನು ಆಸೆಯನ್ನೂ ವ್ಯಕ್ತಪಡಿಸಿದ್ದೆ ಎಂದು ರಶ್ಮಿಕಾ ಬರೆದಿದ್ದಾರೆ.
ನಾನು ಸಿನಿಮಾ ರಂಗಕ್ಕೆ ಕಾಲಿಟ್ಟ ದಿನಗಳಿಂದ ಮಾಧ್ಯಮಗಳು ನನಗೆ ಬಹಳಷ್ಟು ಪ್ರೋತ್ಸಾಹ ನೀಡಿದೆ. ಹೀಗಾಗಿ ಈ ವಿವಾದ ವಿಚಾರವನ್ನು ಮತ್ತಷ್ಟು ತೋರಿಸಬೇಡಿ. ಯಶ್ ಅವರ ಮನಸ್ಸಿಗೆ ನೋವು ಮಾಡಬಾರದು ಎಂದು ನಾನು ಮಾಧ್ಯಮಗಳಲ್ಲಿ ಮನವಿ ಮಾಡುತ್ತಿದ್ದೇನೆ. ಅಷ್ಟೇ ಅಲ್ಲದೇ ನನ್ನ ತಪ್ಪು ಗ್ರಹಿಕೆಯಿಂದ ಆದ ಈ ತಪ್ಪಿಗೆ ನಾನು ಕ್ಷಮೆ ಕೋರುತ್ತೇನೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಅವರು ಬೇಡಿಕೊಂಡಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ರ ‘ಶೋ ಆಫ್ ಮ್ಯಾನ್’ ಕಮೆಂಟ್‍ಗೆ ಯಶ್ ಪ್ರತಿಕ್ರಿಯಿಸಿದ್ದು ಹೀಗೆ