ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ವಿವಾದಿತ ಮಾತುಗಳನ್ನು ಆಡಿದ್ದಾರೆ. ತಮ್ಮ ಹಿಂದಿಯ ಹೊಸ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಅವರು ದಕ್ಷಿಣದ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ಇಲ್ಲಿನ ಸಿನಿಮಾ ತಯಾರಕರು ಹೆಚ್ಚಿನ ರೀತಿಯಲ್ಲಿ ಐಟಂ ಸಾಂಗ್ ಗಳಿಗೆ ಒತ್ತು ನೀಡುತ್ತಾರೆ ಎಂದು ಹೇಳಿದ್ದಾರೆ. ಅವರ ಈ ಮಾತುಗಳು ಇದೀಗ ಚರ್ಚೆಯನ್ನು ಹುಟ್ಟುಹಾಕಿವೆ. ದಕ್ಷಿಣ ಸಿನಿಮಾ ರಂಗದಿಂದಲೇ ಫೇಮಸ್ ಆಗಿರುವ ಇವರು, ಆ ಸಿನಿಮಾ ರಂಗದ ಬಗ್ಗೆಯೇ ಹಗುರವಾಗಿ ಮಾತನಾಡಿದ್ದಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ಅನ್ನು ಮೆಚ್ಚಿಸಲಿಕ್ಕೆ ರಶ್ಮಿಕಾ ಇಂತಹ ಮಾತುಗಳನ್ನು ಆಡಿದ್ದಾರಾ ಎನ್ನುವ ಪ್ರಶ್ನೆಯನ್ನು ಕೆಲವರು ಮಾಡಿದ್ದು, ಕನ್ನಡ ಸಿನಿಮಾ ರಂಗದಿಂದ ನಾಡಿಗೆ ಪರಿಚಯವಾದ, ಅದರಲ್ಲೂ ತಮ್ಮನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ತಂಡದ ಬಗ್ಗೆಯೇ ಅವರು ಸಲ್ಲದ ಮಾತುಗಳನ್ನು ಆಡಿದ್ದರು. ಇದೀಗ ಬಾಲಿವುಡ್ ಸಿನಿಮಾಗಾಗಿ ದಕ್ಷಿಣದ ಸಿನಿಮಾಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ತಿರುಗೇಟು ನೀಡುತ್ತಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್ಗೆ ಹಾರಿದ ರಮ್ಯಾ- ಅಮೃತಾ
ರಶ್ಮಿಕಾ ಮಂದಣ್ಣ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳ ನಂತರ ಇದೀಗ ಬಾಲಿವುಡ್ ನಲ್ಲೂ ಸಾಕಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಈವರೆಗೂ ಅವರಿಗೆ ಬ್ರೇಕ್ ಸಿಗದೇ ಇದ್ದರೂ, ಅಲ್ಲೂ ನೆಲೆಯೂರುವುದಕ್ಕಾಗಿ ಅವರು ಏನೆಲ್ಲ ಕಸರತ್ತು ಮಾಡುತ್ತಾರೆ. ಈ ಕಸರತ್ತಿನ ಭಾಗವಾಗಿ ರಶ್ಮಿಕಾ ಆ ರೀತಿಯ ಮಾತುಗಳನ್ನು ಆಡಿದ್ದಾರೆ ಎನ್ನುವ ಅನುಮಾನ ಕೆಲವರದ್ದು.