ಚೆನ್ನೈ: ದಕ್ಷಿಣ ಭಾರತ ನಟಿ ರಶ್ಮಿಕಾ ಮಂದಣ್ಣ ‘ಪುಷ್ಪ-2’ ಸಿನಿಮಾಗೆ ತಮ್ಮ ಸಂಭಾವನೆಯನ್ನು ಶೇ.50 ಹೆಚ್ಚಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಸಿನಿಮಾ ಯಶಸ್ಸು ತಂದುಕೊಟ್ಟಿದೆ. ಇವರಿಬ್ಬರ ಅಭಿನಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲಿಯೂ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಚಿತ್ರತಂಡವು ‘ಪುಷ್ಪ-2’ ಸಿನಿಮಾ ತಯಾರಿಗೆ ಮುಂದಾಗಿದ್ದು, ಈ ಸಿನಿಮಾ ಮುಂದುವರಿದ ಭಾಗಕ್ಕೆ ರಶ್ಮಿಕಾ ತಮ್ಮ ಸಂಭಾವನೆಯನ್ನು ಶೇ.50 ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಕೇಳಿಬರುತ್ತಿದೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR
ಇತ್ತೀಚಿನ ಸುದ್ದಿಯ ಪ್ರಕಾರ, ಪುಷ್ಪ:ದಿ ರೈಸ್‍ನ ಎರಡನೇ ಭಾಗಕ್ಕಾಗಿ ರಶ್ಮಿಕಾ 3 ಕೋಟಿ ರೂಪಾಯಿಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. ಮೊದಲ ಭಾಗಕ್ಕೆ ರಶ್ಮಿಕಾ 2 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದರು. ಒಂದು ವೇಳೆ ನಿರ್ಮಾಪಕರು ರಶ್ಮಿಕಾಗೆ 3 ಕೋಟಿ ರೂ. ಕೊಡಲು ಒಪ್ಪಿಕೊಂಡರೆ ಇದುವರೆಗಿನ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿ ಇರುತ್ತಾರೆ.
ರಶ್ಮಿಕಾ ದಕ್ಷಿಣದ ಅತ್ಯಂತ ಜನಪ್ರಿಯ ತಾರೆಯಾಗಿ ಮಿಂಚುತ್ತಿದ್ದಾರೆ. ಡಿಯರ್ ಕಾಮ್ರೇಡ್ ಮತ್ತು ಗೀತಾ ಗೋವಿಂದಂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ ಇವರು, ಬಾಲಿವುಡ್ ನ ‘ಮಿಷನ್ ಮಜ್ನು’ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಇವರ ಬಾಲಿವುಡ್ ಚೊಚ್ಚಲ ಸಿನಿಮಾವಾಗಿದೆ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್
‘ಪುಷ್ಪಾ’ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದು, ಮೈತ್ರಿ ಮೂವೀ ಮೇಕರ್ಸ್ ಮತ್ತು ಮುತ್ತಂಶೆಟ್ಟಿ ಮೀಡಿಯಾ ನಿರ್ಮಾಣದಲ್ಲಿ ಮೂಡಿಬಂದಿದೆ. ಈ ವರ್ಷದ ಅತಿ ದೊಡ್ಡ ಸೂಪರ್‍ಹಿಟ್ ಚಲನಚಿತ್ರಗಳಲ್ಲಿ ಪುಷ್ಪಾ ಒಂದಾಗಿದೆ. ಇದು ವಿಶ್ವದಾದ್ಯಂತ ಬಾಕ್ಸ್ ಆಫೀಸ್‍ನಲ್ಲಿ 300 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ಹಿಂದಿ ಅವತರಣಿಕೆ ಈವರೆಗೆ 72 ಕೋಟಿ ರೂ.ಗೂ ಹೆಚ್ಚು ಗಳಿಸಿ ಅಚ್ಚರಿ ಮೂಡಿಸಿದೆ.