ಕನ್ನಡದ ನಟಿ ರಶ್ಮಿಕಾ ಮಂದಣ್ಣಗೆ ‘ಫರ್ಹಾನ್’ (Farhan) ಚಿತ್ರ ಖ್ಯಾತಿಯ ಟಾಲಿವುಡ್ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಕಾಲೆಳೆಯುವಂತೆ ಮಾತನಾಡಿದ್ದರು ಎನ್ನಲಾದ ವಿಡಿಯೋ ಭಾರೀ ವೈರಲ್ ಆಗಿತ್ತು. ಪುಷ್ಪ (Pushpa) ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾಗಿಂತಲೂ ತಾವು ಅದ್ಭುತವಾಗಿ ನಟಿಸುತ್ತಿದ್ದೆ ಎಂದು ಹೇಳಲಾದ ವಿಡಿಯೋ ಅದಾಗಿತ್ತು. ಈ ವಿಷಯವಾಗಿ ರಶ್ಮಿಕಾ ಸುಮ್ಮನಿದ್ದರೂ, ಅವರ ಫ್ಯಾನ್ಸ್ ಮಾತ್ರ ಐಶ್ವರ್ಯಾ ರಾಜೇಶ್ ಮೇಲೆ ಮುಗಿಬಿದ್ದಿದ್ದರು. ಹಾಗಾಗಿ ಐಶ್ವರ್ಯಾ ತಾವು ಹಾಗೆ ಹೇಳಿಲ್ಲ ತಮ್ಮ ಮಾತುಗಳನ್ನು ತಿರುಚಲಾಗಿದೆ ಎಂದು ಪತ್ರ ಬರೆದಿದ್ದರು.
ಈ ವಿಷಯವನ್ನು ಗಮನಿಸಿದ ರಶ್ಮಿಕಾ ಮಂದಣ್ಣ (Rashmika Mandanna), ಕಾಲೆಳೆದ ನಟಿಗೆ ಸ್ನೇಹದ ಹಸ್ತ ಚಾಚಿ, ಫರ್ಹಾನ್ ಸಿನಿಮಾ ದಾಖಲೆ ರೀತಿಯಲ್ಲಿ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ. ‘ಹಾಯ್ ಲವ್ ಎಂದು ಶುರು ಮಾಡಿ, ನಾವಿಬ್ಬರೂ ಏನು ಎನ್ನುವುದು ನಮಗೆ ಗೊತ್ತಿದೆ. ನಿಮ್ಮ ಬಗ್ಗೆ ನನಗೆ ಪ್ರೀತಿ ಹಾಗೂ ಗೌರವವಿದೆ. ನೀವು ಏನು ಹೇಳಿದ್ದೀರಿ ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಫರ್ಹಾನ್ ಚಿತ್ರಕ್ಕೆ ಶುಭವಾಗಲಿ’ ಎಂದು ಎದ್ದಿದ್ದ ವಿವಾದಕ್ಕೆ ರಶ್ಮಿಕಾ ತೆರೆ ಎಳೆದಿದ್ದಾರೆ.
ನಿನ್ನೆಯಷ್ಟೇ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದರು ಐಶ್ವರ್ಯಾ. ತಾವು ಆ ರೀತಿ ಮಾತೇ ಆಡಿಲ್ಲ. ಎಲ್ಲವೂ ಕಪೋಕಲ್ಪಿತ ಎಂದು ಅವರು ವಿವರಣೆ ನೀಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ‘ಪುಷ್ಪ ಸಿನಿಮಾದ ಶ್ರೀವಲ್ಲಿ (Srivalli) ಪಾತ್ರವನ್ನು ರಶ್ಮಿಕಾ ಮಂದಣ್ಣಕ್ಕಿಂತಲೂ ಚೆನ್ನಾಗಿ ಮಾಡುತ್ತಿದ್ದೆ’ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಇದನ್ನೂ ಓದಿ:‘ಆದಿಪುರುಷ್’ ಪೋಸ್ಟರ್ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ
ಈ ಕುರಿತು ಐಶ್ವರ್ಯಾ ರಾಜೇಶ್ ಅವರ ಪಿ.ಆರ್ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಇದೊಂದು ತಪ್ಪು ಕಲ್ಪನೆಯಿಂದ ಆದ ಪ್ರಮಾದ. ಯಾವುದೇ ಕಾರಣಕ್ಕೂ ಐಶ್ವರ್ಯಾ ಅವರು ಆ ರೀತಿ ಮಾತುಗಳನ್ನು ಆಡಿಲ್ಲ. ‘ನಿಮ್ಮ ನೆಚ್ಚಿನ ಪಾತ್ರ ಯಾವುದು? ಯಾವ ರೀತಿಯ ಪಾತ್ರದಲ್ಲಿ ಕಾಣಲು ಬಯಸುತ್ತೀರಿ’ ಎಂದು ಕೇಳಲಾದ ಪ್ರಶ್ನೆಗೆ ‘ಪುಷ್ಪ ಸಿನಿಮಾದ ಶ್ರೀವಲ್ಲಿ ರೀತಿಯ ಪಾತ್ರಗಳು ಎಂದರೆ ನನಗೆ ಇಷ್ಟೆ. ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ’ ಎಂದಿದ್ದರು.
ಐಶ್ವರ್ಯಾ ರಾಜೇಶ್ ಆಡಿದ್ದಾರೆ ಎನ್ನಲಾದ ಮಾತುಗಳು ಸಖತ್ ಟ್ರೋಲ್ ಆಗಿದ್ದವು. ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕೂಡ ಐಶ್ವರ್ಯಾ ಮೇಲೆ ಮುಗಿ ಬಿದ್ದದ್ದರು. ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಇದೆಲ್ಲವನ್ನೂ ಗಮನಿಸಿದ ಐಶ್ವರ್ಯಾ ಅದನ್ನು ತಿಳಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಾವು ಆ ರೀತಿಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.