ಬೀಜಿಂಗ್: ಚೀನಾದ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ವಿರುದ್ಧ ಅಪರೂಪದಲ್ಲಿ ಅಲ್ಲಿನ ಜನರು ಪ್ರತಿಭಟನೆ (Protest) ನಡೆಸಿರುವುದಾಗಿ ವರದಿಯಾಗಿದೆ. ಬೀಜಿಂಗ್‌ನ (Beijing) ಸಿಟಾಂಗ್ ಸೇತುವೆ ಮೇಲೆ 2 ದೊಡ್ಡ ಬ್ಯಾನರ್‌ಗಳು (Banner) ಕಂಡುಬಂದಿದ್ದು, ಅದರಲ್ಲಿ ಅಧ್ಯಕ್ಷ ಸ್ಥಾನದಿಂದ ಕ್ಸಿ ಜಿನ್‌ಪಿಂಗ್ ಅವರನ್ನು ತೆಗೆದು ಹಾಕುವಂತೆ ಕರೆ ನೀಡಲಾಗಿದೆ.
ಸೇತುವೆ ಮೇಲೆ ಕಂಡುಬಂದ 1 ಬ್ಯಾನರ್‌ನಲ್ಲಿ ಕೋವಿಡ್ ಪರೀಕ್ಷೆ ಬೇಡ, ಆಹಾರಕ್ಕೆ ಹೌದು ಎನ್ನಿ. ಲಾಕ್‌ಡೌನ್ ಬೇಡ, ಸ್ವಾತಂತ್ರ್ಯಕ್ಕೆ ಹೌದು ಎನ್ನಿ. ಸುಳ್ಳು ಬೇಡ, ಘನತೆಗೆ ಹೌದು ಎನ್ನಿ. ಸಾಂಸ್ಕೃತಿಕ ಕ್ರಾಂತಿ ಬೇಡ, ಸುಧಾರಣೆಗೆ ಹೌದು ಎನ್ನಿ. ಮಹಾನಾಯಕ ಬೇಡ, ಮತ ಚಲಾವಣೆ ಬೇಕು ಎನ್ನಿ. ಗುಲಾಮನಾಗಬೇಡಿ, ಪ್ರಜೆಯಾಗಿರಿ ಎಂದು ಬರೆಯಲಾಗಿದೆ.
ತೂಗುಹಾಕಲಾಗಿದ್ದ ಇನ್ನೊಂದು ಬ್ಯಾನರ್‌ನಲ್ಲಿ, ಮುಷ್ಕರ ಮಾಡಿ, ಸರ್ವಾಧಿಕಾರಿ ಹಾಗೂ ರಾಷ್ಟ್ರದ್ರೋಹಿ ಕ್ಸಿ ಜಿನ್‌ಪಿಂಗ್ ಅವರನ್ನು ತೆಗೆದುಹಾಕಿ ಎಂದು ಬರೆಯಲಾಗಿದೆ. ಈ ಬ್ಯಾನರ್‌ಗಳ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ತಮ್ಮ ಅಧ್ಯಕ್ಷನ ವಿರುದ್ಧ ಪ್ರತಿಭಟನೆ ನಡೆಸಲು ಚೀನಾದ ಜನರಿಗೆ ಮನವೊಲಿಸಲಾಗುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಸಿಸಿಐಗೆ ಜಿಎಸ್‍ಟಿ ಬರೆ – 2023ರ ವಿಶ್ವಕಪ್‍ಗೂ ಮುನ್ನ 955 ಕೋಟಿ ರೂ. ನಷ್ಟದ ಭೀತಿ
ಬೀಜಿಂಗ್‌ನಲ್ಲಿ ಕಮ್ಯುನಿಸ್ಟ್ ನಾಯಕತ್ವವನ್ನು ಟೀಕಿಸುವ ಬ್ಯಾನರ್‌ಗಳನ್ನು ತೂಗುಹಾಕಲಾಗಿದೆ ಎಂಬ ಸುದ್ದಿ ಹರಡುತ್ತಲೇ ಚೀನಾ ಈ ಸುದ್ದಿಯನ್ನು ತಕ್ಷಣವೇ ಅಲ್ಲಗೆಳೆದಿದೆ. ಈ ಪ್ರದೇಶದಲ್ಲಿ ಯಾವುದೇ ನಾಯಕತ್ವ ವಿರೋಧಿ ಘಟನೆ ನಡೆದಿಲ್ಲ ಎಂದು ಚೀನಾ ಪೊಲೀಸರು ಹೇಳಿದ್ದಾರೆ.
ಪಾಶ್ಚಿಮಾತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಚಿತ್ರಗಳು ಮತ್ತು ವೀಡಿಯೊಗಳು ಹರಡಿದಾಡುತ್ತಿದ್ದಂತೆಯೇ, ಚೀನಾವು ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಿಂದ ಚಿತ್ರಗಳ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕಿದೆ. ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ ಬರೆಯಲಾಗಿದ್ದ ಕೆಲ ಟ್ವಿಟ್ಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಕ್ಸಿ ಜಿನ್‌ಪಿಂಗ್ ಅವರು 2012 ರಲ್ಲಿ ಚೀನಾದ ಅಧ್ಯಕ್ಷರಾಗಿ ನೇಮಕವಾಗಿದ್ದು, ಇದೇ ಭಾನುವಾರದಂದು 3ನೇ ಅವಧಿಗೆ ಮತ್ತೆ 5 ವರ್ಷ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಮೂನ್‌ಲೈಟಿಂಗ್‌ಗೆ ಜಾಗ ಇಲ್ಲ – ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್