– ಸುಪ್ರೀಂ ಚಾಟಿ ಬಳಿಕವೂ ಬುದ್ದಿ ಕಲಿಯದ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಎಲ್ಲವೂ ಖುಲ್ಲಂ ಖುಲ್ಲ ಎನ್ನುವಂತಾಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಇದ್ದ ವೇಳೆ ಸಿಕ್ಕ ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿತ್ತು. ಇದೀಗ ಮತ್ತೊಂದು ರಾಜಾತಿಥ್ಯ ಕೇಸ್‌ಗೆ ಪರಪ್ಪನ ಅಗ್ರಹಾರ ಜೈಲು ಸುದ್ದಿಯಾಗಿದೆ.
ಹೌದು. ವಿಕೃತ ಕಾಮಿ ಉಮೇಶ್ ರೆಡ್ಡಿ (Umesh Reddy) ಹಾಗೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನ ಆಗಿರುವ ನಟಿ ರನ್ಯಾ ರಾವ್ ಪ್ರಿಯಕರ ತರುಣ್ ರಾಜ್ (Tarun Raj) ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಕೃತ ಕಾಮಿಯ ಬಿಂದಾಸ್ ಲೈಫು
ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಮೆಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿದ್ದಾನೆ. ವಿಕೃತ ಕಾಮಿಗೆ ಜೈಲಿನಲ್ಲಿ ಟಿವಿ, ಮೊಬೈಲ್ ಸೌಭಲಭ್ಯ ನೀಡಲಾಗಿದೆ. ಜೊತೆಗೆ ತನಗೆ ಬೇಕಾದ ಅಡುಗೆ ಮಾಡಿಕೊಳ್ಳಲು ಜೈಲಿನೊಳಗೇ ಅಧಿಕಾರಿಗಳು ಸೌಲಭ್ಯ ಕಲ್ಪಿಸಿದ್ದಾರೆ. ಉಮೇಶ್ ರೆಡ್ಡಿ ಟಿವಿ ನೋಡ್ತಾ, ಆಂಡ್ರಾಯ್ಡ್ ಮತ್ತು ಕೀಪ್ಯಾಡ್ ಮೊಬೈಲ್ ಗಳನ್ನಿಟ್ಟುಕೊಂಡು ಮಾತನಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಇದರಿಂದ ಸೌಲಭ್ಯ ಕೊಟ್ಟ ಜೈಲಾಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.
ರನ್ಯಾ ರಾವ್ ಪ್ರಿಯಕರನಿಗೂ ಹೈಫೈ ಟ್ರೀಟ್ಮೆಂಟ್
ಉಮೇಶ್ ರೆಡ್ಡಿ ಅಷ್ಟೇ ಅಲ್ಲ, ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ಬಂಧನ ಆಗಿರುವ ರನ್ಯಾ ರಾವ್ ಪ್ರಿಯಕರ ತೆಲುಗು ಸಿನಿಮಾ ನಟ ತರುಣ್ ರಾಜ್ ಕೂಡ ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ದಾನೆ. ಮೊಬೈಲ್ ಜೊತೆಗೆ ಟಿವಿ ಸೌಲಭ್ಯ ಕಲ್ಪಿಸಿರೋದು ವೈರಲ್ ಆಗಿರುವ ವಿಡಿಯೋದಿಂದ ಗೊತ್ತಾಗಿದೆ.
ಒಟ್ಟಿನಲ್ಲಿ ಕೈದಿಗಳ ರಾಜಾತಿಥ್ಯಕ್ಕೆ ಹೆಸರುವಾಸಿಯಾಗಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು, ಸಿಬ್ಬಂದಿಗೆ ಈಗ ಸಂಕಷ್ಟ ಎದುರಾಗಿದ್ದು, ಮುಂದಿನ ಕ್ರಮ ಕಾದುನೋಡಬೇಕಿದೆ.
ಉಮೇಶ್ ರೆಡ್ಡಿ ಕೇಸ್ ಏನು?
1998 ರ ಫೆ. 28 ರಂದು ಬೆಂಗಳೂರು ನಗರದಲ್ಲಿ ನಡೆದಿದ್ದ ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉಮೇಶ್ ರೆಡ್ಡಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿ ಆದೇಶಿಸಿತ್ತು. ಅಲ್ಲದೆ, ನ್ಯಾಯಾಲಯಕ್ಕೆ ಪೆರೋಲ್ ಸೇರಿದಂತೆ ಯಾವುದೇ ರೀತಿಯ ಅರ್ಜಿ ಸಲ್ಲಿಸಬೇಕು ಎಂದಾದರೆ ಕನಿಷ್ಟ 30 ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.




