ಧಾರವಾಡ: ಮನೆಯಲ್ಲಿ ಯಾರು ಇಲ್ಲದ ವೇಳೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ, ಚಪ್ಪಲಿ ಏಟು ಕೊಟ್ಟ ಘಟನೆ ಜಿಲ್ಲೆಯ ಮನಸೂರ ಗ್ರಾಮದಲ್ಲಿ ನಡೆದಿದೆ.
ಮನಸೂರ ಗ್ರಾಮದ ನಿವಾಸಿ ನರಸಿಂಗ ಏಟು ತಿಂದ ಯುವಕ. ಗ್ರಾಮದ ಮಹಿಳೆಯೊಬ್ಬರ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಾಡಿದಾಗ ಅಕ್ಕ ಪಕ್ಕದ ಮನೆಯವರು ಬಂದು ಆಕೆಯನ್ನು ಆರೋಪಿಯಿಂದ ರಕ್ಷಿಸಿದ್ದಾರೆ.
ನಂತರ ಆರೋಪಿ ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ ಗ್ರಾಮಸ್ಥರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಹೀನ ಕೃತ್ಯಕ್ಕೆ ಕೈಹಾಕಿದ್ದಕ್ಕೆ ಚಪ್ಪಲಿಯಿಂದ ಹೊಡೆದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸದ್ಯ ಆರೋಪಿಯನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.