ರಾಮನಗರ: ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಕೊಲೆಗೈದ ಘಟನೆ ಮಾಗಡಿ ಪೊಲೀಸ್ (Magadi Police) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಬೆಂಗಳೂರಿನ (Bengaluru) ಗೌರಿಪಾಳ್ಯದ ಇರ್ಫಾನ್ ಖಾನ್ ವಿರುದ್ಧ ಮಾಗಡಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆ ಅಡಿಯಲ್ಲಿ (POCSO Act) ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟ ಮಹಿಳೆಗೆ ಕೋರ್ಟ್ ಆವರಣದಲ್ಲೇ ಚಾಕು ಇರಿದ ದುಷ್ಕರ್ಮಿ
ಬಾಲಕಿ ಕುಟುಂಬದ ಸಂಬಂಧಿಯಾದ ಇರ್ಫಾನ್ ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಇದೇ ರೀತಿ ಜು.20 ರಂದು ಮನೆಗೆ ಬಂದಿದ್ದ ಆತ, ಬಾಲಕಿಗೆ ಐಸ್ ಕ್ರೀಂ ಕೊಡಿಸುವುದಾಗಿ ತನ್ನ ಸ್ಕೂಟರ್‌ನಲ್ಲಿ ಕರೆದೊಯ್ದಿದ್ದಾನೆ. ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಪೋಷಕರು ವಿಚಾರಿಸಿದಾಗ, ಇರ್ಫಾನ್ ಖಾನ್ ಬಾಲಕಿಯನ್ನ ಕರೆದೊಯ್ಯುತ್ತಿದ್ದ ಬಗ್ಗೆ ಸ್ಥಳೀಯರು ತಿಳಿಸಿದ್ದರು.
ಬಳಿಕ ಇರ್ಫಾನ್‍ಗೆ ಫೋನ್ ಮಾಡಿದ ಫೋಷಕರು ಮಗು ಬಗ್ಗೆ ವಿಚಾರಿಸಿದಾಗ ನನಗೇನು ಗೊತ್ತಿಲ್ಲ ಎಂದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಪೋಷಕರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಸೇರಿದಂತೆ, ವಿವಿಧ ಮೂಲಗಳನ್ನು ಆಧರಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿ ಬೆಂಗಳೂರು-ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿ ಬಳಿ ಓಡಾಡಿರುವುದನ್ನ ಗಮನಿಸಿ, ಸುತ್ತಮುತ್ತ ಹುಡುಕಾಡಿದಾಗ ರಸ್ತೆ ಬದಿಯ ಪೊದೆಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು.
ಇದೀಗ ಕಲಾಸಿಪಾಳ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಘಟನೆ ಖಂಡಿಸಿ ಮಾಗಡಿಯ ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿದೆ. ಮಹಿಳೆಯರು ಸೇರಿ ನೂರಾರು ಮಂದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ, ಇಲ್ಲದಿದ್ದರೆ ಎನ್‍ಕೌಂಟ್ ಮಾಡಿ ಎಂದು ಪೋಷಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 6 ವರ್ಷದಿಂದ ಕೊಲೆಗೆ ಸಂಚು – ಧರ್ಮಾಧಿಕಾರಿ ಹತ್ಯೆ ಆರೋಪಿ ಹೇಳಿದ್ದೇನು?