Bengaluru City

ರಾಘವೇಶ್ವರ ಶ್ರೀ ಜಾಮೀನು ವಜಾಗೊಳಿಸಿ ಶೀಘ್ರವೇ ಬಂಧಿಸಿ: ಅಖಿಲ ಹವ್ಯಕ ಒಕ್ಕೂಟ

Published

on

Share this

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳನ್ನು ಕೂಡಲೇ ಬಂಧಿಸಬೇಕೆಂದು ಅಖಿಲ ಹವ್ಯಕ ಒಕ್ಕೂಟ ಆಗ್ರಹಿಸಿದೆ.

ಪ್ರೆಸ್‍ಕ್ಲಬ್‍ನಲ್ಲಿ ಅಖಿಲ ಹವ್ಯಕ ಒಕ್ಕೂಟ ವತಿಯಿಂದ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್,  ಪ್ರೇಮಲತಾ ದಿವಾಕರ್ ಶಾಸ್ತ್ರಿ ಮೇಲೆ ಹಾಕಲಾಗಿದ್ದ ಬ್ಲಾಕ್‍ಮೇಲ್ ಕೇಸ್‍ನಲ್ಲಿ ಯಾವುದೇ ಸತ್ಯಾಂಶ ಇಲ್ಲ ಎನ್ನುವುದು ಸಿಐಡಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಬ್ಲಾಕ್‍ಮೇಲ್ ಕೇಸ್ ಆಧಾರದ ಮೇಲೆ ಶ್ರೀಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಕೇಸ್‍ನಲ್ಲಿ ಪ್ರೇಮಲತಾ ದಂಪತಿಗೆ ರಿಲೀಫ್ ಸಿಕ್ಕಿದ ಕಾರಣ ಜಾಮೀನನ್ನು ವಜಾಗೊಳಿಸಿ ಶ್ರೀಗಳನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದರು.

ರಾಘವೇಶ್ವರ ಸ್ವಾಮೀಜಿ ರಾಮಚಂದ್ರಾಪುರ ಮಠದ ಪೀಠವನ್ನು ಹಾಳು ಮಾಡಿದ್ದಾರೆ. ಶ್ರೀಗಳು ಪ್ರಚಾರ ಪ್ರಿಯರಾಗಿದ್ದು, ಕೇವಲ ಪ್ರಚಾರಕ್ಕಾಗಿ ಜನರನ್ನು ವಂಚಿಸುತ್ತಿದ್ದಾರೆ. ಸ್ವಾಮೀಜಿ ಮಾಫಿಯಾ ಸಂಸ್ಕ್ರತಿಯನ್ನು ಮಠದಲ್ಲಿ ಬೆಳೆಸಿಕೂಂಡು ಬಂದಿದ್ದಾರೆ. ಆದರೆ ಈ ಸಂಸ್ಕೃತಿ ಇನ್ನು ಮುಂದೆ ನಡೆಯುವುದಿಲ್ಲ. ಶ್ರೀ ವಿರುದ್ಧದ ಕಾನೂನು ಸಮರ ಮುಂದುವರಿಯುತ್ತದೆ ಎಂದು ಶ್ರೀನಿವಾಸ್ ಹೇಳಿದರು.

ಪತ್ರಿಕಾ ಹೇಳಿಕೆಯಲ್ಲಿ ಏನಿದೆ?
ಪ್ರೇಮಲತಾ ದಿವಾಕರ ಶಾಸ್ತ್ರಿ ದಂಪತಿ, ನಾರಾಯಣ ಶಾಸ್ತ್ರಿ ಮೇಲೆ ಶ್ರೀಗಳ ಅನುಯಾಯಿಯಾದ ಚಂದ್ರಶೇಖರ್ ಅವರು ಹಾಕಿದ್ದ ಬ್ಲಾಕ್‍ಮೇಲ್ ಕೇಸ್ ದೂರು ದುರುದ್ದೇಶ ಪೂರಿತ ಎಂದು ಸಿಐಡಿ ಪೊಲೀಸರು ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಇದರಿಂದಾಗಿ ಪ್ರೇಮಲತಾ ಅವರು ಶ್ರೀ ವಿರುದ್ಧ ಮಾಡಿರುವ ರೇಪ್ ಕೇಸ್ ಆರೋಪಕ್ಕೆ ಸಂಪೂರ್ಣ ಬಲ ಬಂದಿದೆ. ಬ್ಲಾಕ್‍ಮೇಲ್ ಕೇಸನ್ನು ಅಸ್ತ್ರವಾಗಿಸಿಕೊಂಡು ಸೆಷನ್ಸ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಹಾಕಲಾಗಿದ್ದ ಕೇಸನ್ನು ವಿಚಾರಣೆ ಇಲ್ಲದೇ ವಜಾ ಮಾಡಿಸಲು ಶ್ರೀಗಳಿಗೆ ಸಾಧ್ಯವಾಗಿತ್ತು. ಆದರೆ ಇದೊಂದು ಹೀನಾಯ ಷಡ್ಯಂತ್ರವೆಂದು ಸಾಬೀತಾಗಿದೆ.

ಸ್ವಾಮೀಜಿ ತನ್ನ ತಪ್ಪನ್ನು ಹೇಳುವವರ ಮೇಲೆ ಕೇಸ್ ದಾಖಲಿಸಿ ಭಾವನಾತ್ಮಕವಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ತನ್ನ ಮೇಲಿರುವ ತಪ್ಪುಗಳನ್ನು ಮುಚ್ಚಿ ಹಾಕಲು ಗೋವಿನ ಬಗ್ಗೆ ಕಳಕಳಿ ಹೊಂದುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಗೋ ಹತ್ಯೆಯ ವಿರೋಧಿ ಕಾರ್ಯಕ್ರಮಗಳು ನಾಟಕೀಯವಾಗಿದ್ದು, ಮಠ ಈಗ ದುರುಪಯೋಗವಾಗುತ್ತಿದೆ. ಸರ್ಕಾರ ಕೂಡಲೇ ಕೆಲಕಾಲ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಅಖಿಲ ಹವ್ಯಕ ಒಕ್ಕೂಟ ಮನವಿ ಮಾಡಿದೆ.

ಏನಿದು ಪ್ರಕರಣ?
ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ ಶಾಸ್ತ್ರೀ ದಂಪತಿ ಮೂರು ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಈ ಹಣವನ್ನು ನೀಡದೇ ಇದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ರಾಘವೇಶ್ವರ ಶ್ರೀ ಪರವಾಗಿ ಚಂದ್ರಶೇಖರ್ ಎಂಬವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ 2014ರ ಆಗಸ್ಟ್ ನಲ್ಲಿ ಬ್ಲಾಕ್‍ಮೇಲ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಬಳಿಕ ದಿವಾಕರ್ ಶಾಸ್ತ್ರಿ, ಪ್ರೇಮಲತಾ ಹಾಗೂ ನಾರಾಯಣ ಶಾಸ್ತ್ರಿ ಅವರನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನಲ್ಲಿದ್ದ ಆರೋಪಿಗಳಿಗೆ 21 ದಿನಗಳ ಬಳಿಕ ಜಾಮೀನು ಸಿಕ್ಕಿತ್ತು.

ಬ್ಲಾಕ್‍ಮೇಲ್ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಐಡಿ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ 2017ರ ಫೆ.22ರಂದು ಹೊನ್ನಾವರ ಜಿಎಂಎಫ್‍ಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಪ್ರೇಮಲತಾ ಅವರು ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವ, ಒಂದು ದಿನದ ಮುಂಚೆಯೇ ಈ ಪ್ರಕರಣ ದಾಖಲಾಗಿದೆ. ಈ ಪ್ರಕರಣ ದುರದ್ದೇಶದಿಂದ ದಾಖಲಿಸಿದಂತೆ ಕಾಣುತ್ತದೆ. ಹೀಗಾಗಿ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಕಂಡುಬಂದಿಲ್ಲ ಎಂದು ಬಿ ರಿಪೋರ್ಟ್ ನಲ್ಲಿ  ಸಿಐಡಿ ಉಲ್ಲೇಖಿಸಿತ್ತು.

Click to comment

Leave a Reply

Your email address will not be published. Required fields are marked *

Advertisement
Advertisement