ಶಿವಮೊಗ್ಗ: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿಜೆಪಿ ನಾಯಕ, ಮಾಜಿ ಸಚಿವ ಹರತಾಳು ಹಾಲಪ್ಪ ಭವಿಷ್ಯ ಇಂದು ನಿರ್ಧಾರ ಆಗಲಿದೆ.
ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಏಳು ವರ್ಷಗಳ ಕಾಲ ವಿಚಾರಣೆ ನಡೆಸಿದ ಶಿವಮೊಗ್ಗ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ.
Advertisement
ಏನಿದು ಪ್ರಕರಣ?: ಹರತಾಳು ಹಾಲಪ್ಪ ಅವರು ವಿನೋಬಾ ನಗರದ ಕಲ್ಲಹಳ್ಳಿಯಲ್ಲಿರುವ ಸ್ನೇಹಿತ ವೆಂಕಟೇಶಮೂರ್ತಿಯವರ ಪತ್ನಿ ಚಂದ್ರಾವತಿ ಮೇಲೆ 2009ರ ನವೆಂಬರ್ 26ರಂದು ಅತ್ಯಾಚಾರ ಎಸಗಿದ್ದಾರೆ ಅಂತಾ ಆರೋಪ ಮಾಡಲಾಗಿತ್ತು. ಈ ಪ್ರಕರಣ ಮೇ 2, 2010 ರಂದು ಬೆಳಕಿಗೆ ಬಂದಿತ್ತು. ಕಲ್ಲಹಳ್ಳಿಯಲ್ಲಿನ ಗೆಳೆಯ ವೆಂಕಟೇಶ್ ಮನೆಗೆ ಊಟಕ್ಕೆ ಹೋಗಿದ್ದಾಗ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಅರಣ್ಯ ಇಲಾಖೆ ಗೆಸ್ಟ್ ಹೌಸ್‍ನಲ್ಲಿ ಮಾತ್ರೆ ತರುವಂತೆ ಗೆಳಯನನ್ನು ಕಳುಹಿಸಿ ರೇಪ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಮಾತ್ರೆ ತೆಗೆದುಕೊಂಡು ಬಂದಾಗ ಹೆಂಡತಿ ಕಿರುಚಾಡಿಕೊಂಡು ಓಡಿಬಂದಿದ್ದು, ಈ ದೃಶ್ಯವನ್ನು ಸಂತ್ರಸ್ತೆ ಪತಿ ವೆಂಕಟೇಶ್ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು.
Advertisement
ಸಂತ್ರಸ್ತೆ ಚಂದ್ರಾವತಿ ಬೆಂಗಳೂರಲ್ಲಿ ಪೊಲೀಸ್ ಮಹಾನಿರ್ದೇಶಕ, ರಾಜ್ಯಪಾಲ ಹಾಗೂ ಶಿವಮೊಗ್ಗದ ವಿನೋಬಾನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಕುರಿತು ರಾಜ್ಯಾದ್ಯಂತ ವ್ಯಾಪಕ ಹೋರಾಟ ನಡೆದ ಬಳಿಕ ಒತ್ತಡಕ್ಕೆ ಮಣಿದಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರು.
Advertisement
ಪ್ರಕರಣದ ತನಿಖೆ ನಡೆಸಿದ ಸಿಐಡಿ ಪೊಲೀಸರು ಶಾಸಕ ಹರತಾಳು ಹಾಲಪ್ಪ ಅವರ ವಿರುದ್ಧ ಶಿವಮೊಗ್ಗ 2ನೇ ಜೆಎಂಎಫ್ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.