ಭುವನೇಶ್ವರ: ದಿವ್ಯಾಂಗ ಹುಡುಗಿಯನ್ನು ಅತ್ಯಾಚಾರ ಮಾಡಿದ್ದ ಆರೋಪಿ ಯುವಕನನ್ನು ಸ್ಥಳೀಯರೇ ಥಳಿಸಿ ಕೊಂದಿರುವ ಘಟನೆ ಒಡಿಶಾದ ಕೆಯೊಂಝಾರ್ ನಲ್ಲಿ ನಡೆದಿದೆ.
ಈ ಘಟನೆ ಕೆಯೊಂಝಾರ್ ಜಿಲ್ಲೆಯ ಬಮೇಬಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತನನ್ನು ಗಣೇಶ್ ಪಿಂಗೂವಾ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?
ಸಂತ್ರಸ್ತೆಯ ಪೋಷಕರು ಜೀವನಕ್ಕಾಗಿ ಅರಣ್ಯದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಅದರಂತೆಯೇ ಒಂದು ದಿನ ತಮ್ಮ ಮಗಳನ್ನು ಮನೆಯಲ್ಲಿ ಬಿಟ್ಟು ಕಾಡಿಗೆ ಹೋಗಿದ್ದಾರೆ. ಈ ವೇಳೆ ಆರೋಪಿ ಗಣೇಶ್ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ತಿಳಿದುಕೊಂಡು ಮನೆಗೆ ಹೋಗಿದ್ದಾನೆ. ಬಳಿಕ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾಡಿನಿಂದ ತಾಯಿ ಮನೆಗೆ ಹಿಂದಿರುಗಿದಾಗ ಸಂತ್ರಸ್ತೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ತಾಯಿ ತಮ್ಮ ಸಂಬಂಧಿಕರು ಮತ್ತು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಳಿದು ಕೋಪಗೊಂಡ ಸ್ಥಳೀಯರು ಯುವಕನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಬಮೇಬಾರಿ ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡ ಯುವಕನನ್ನು ಸ್ಥಳೀಯರಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆರೋಪಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಸದ್ಯಕ್ಕೆ ಬಮೇಬಾರಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಯುವಕನ ಮೇಲೆ ದಾಳಿ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv