ನವದೆಹಲಿ: ಅತ್ಯಾಚಾರ ಆರೋಪಿ ಎಎಪಿ ಶಾಸಕ ಹರ್ಮಿತ್ ಸಿಂಗ್ ಪಠಾಣಮಜ್ರಾ ಆಸ್ಟ್ರೇಲಿಯಾದಲ್ಲಿ ತಲೆಮರೆಸಿಕೊಂಡಿದ್ದು, ಜಾಮೀನು ಸಿಕ್ಕ ಬಳಿಕ ಭಾರತಕ್ಕೆ ವಾಪಸ್ ಬರುತ್ತೇನೆಂದು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಸೆ.2 ರಿಂದ ಪಂಜಾಬ್ ಎಎಪಿ ಶಾಸಕ ತಲೆಮರೆಸಿಕೊಂಡಿದ್ದಾರೆ. ವಿಡಿಯೋ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪಟಿಯಾಲ ಪೊಲೀಸರು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕನ ವಿರುದ್ಧ ಲುಕ್-ಔಟ್ ನೋಟಿಸ್ ಕೂಡ ಹೊರಡಿಸಿದ್ದಾರೆ. ಶುಕ್ರವಾರ ಆಸ್ಟ್ರೇಲಿಯಾ ಮೂಲದ ಪಂಜಾಬಿ ವೆಬ್ ಚಾನೆಲ್‌ಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಪಠಾಣ್‌ಮಜ್ರಾ ಕಾಣಿಸಿಕೊಂಡಿದ್ದಾರೆ. ‘ಜಾಮೀನು ಪಡೆದ ನಂತರವೇ ಮನೆಗೆ ಮರಳುತ್ತೇನೆ’ ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ತಮ್ಮ ವಿರುದ್ಧದ ಪ್ರಕರಣವನ್ನು ನಿರಾಕರಿಸಿದ್ದಾರೆ. ಇದು ರಾಜಕೀಯ ಪಿತೂರಿ. ಪಂಜಾಬ್ ಜನರ ಪರವಾಗಿ ಮಾತನಾಡುವ ಧ್ವನಿ ಅಡಗಿಸುವ ಉದ್ದೇಶದಿಂದ ನನ್ನ ಮೇಲೆ ಸುಳ್ಳಿನ ಆರೋಪ ಹೊರಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಠಾಣಮಜ್ರಾ ಕೋರ್ಟಿಗೆ ಹಾಜರಾಗಿಲ್ಲ. ಪಟಿಯಾಲ ನ್ಯಾಯಾಲಯವು ಈಗಾಗಲೇ ಘೋಷಿತ ಅಪರಾಧಿ ವಿಚಾರಣೆಯನ್ನು ಪ್ರಾರಂಭಿಸಿದೆ.

