ಬಾಲಿವುಡ್ ಖ್ಯಾತ ನಟ ರಣ್ವೀರ್ ಸಿಂಗ್ (Ranveer Singh) ನಟನೆಯ ‘ಸರ್ಕಸ್’ (Circus) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿತ್ರತಂಡ ಅಂದುಕೊಂಡಂತೆ ಸಿನಿಮಾ ಗೆಲ್ಲಲಿಲ್ಲ ಎನ್ನುವ ಮಾತು ಸ್ವತಃ ಬಾಲಿವುಡ್ ಅಂಗಳದಿಂದಲೇ ಕೇಳಿ ಬರುತ್ತಿದೆ. ಈ ಸೋಲನ್ನು ಅರಗಿಸಿಕೊಳ್ಳಲಾಗದೇ ನಟ ರಣ್ವೀರ್ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಜೊತೆ ಮುಂಬೈ ತೊರೆದಿದ್ದಾರೆ ಎನ್ನುವುದು ಸದ್ಯಕ್ಕಿರುವ ಸುದ್ದಿ.
ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ದೋಣಿ ಹತ್ತಿರ ಹೊರಟಿರುವ ಫೋಟೋಗಳು ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದ್ದು, ಸೋಲಿನ ಕಾರಣದಿಂದಾಗಿಯೇ ಪತ್ನಿಯೊಂದಿಗೆ ರಣವೀರ್ ಮುಂಬೈ ತೊರೆದಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಸರ್ಕಸ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹೊಂದಲಾಗಿತ್ತು. ಸೋಲರಿಯದ ಸರದಾರ ಎಂದೇ ಖ್ಯಾತರಾಗಿರುವ ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾವಾಗಿದ್ದು, ಈ ಸಿನಿಮಾ ಕೂಡ ಭರ್ಜರಿ ಗೆಲ್ಲುತ್ತದೆ ಎನ್ನುವ ಮಾತಿತ್ತು. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ
ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ಕಾರಣದಿಂದಾಗಿಯೇ ರೋಹಿತ್ ಶೆಟ್ಟಿ (Rohit Shetty) , ಬಾಲಿವುಡ್ ತೆಗಳುವವರು ವಿರುದ್ಧ ಗುಡುಗಿದ್ದರು. ಬಾಲಿವುಡ್ ಗೆ ಒಂದು ವರ್ಷ ಹಿನ್ನೆಡೆಯಾಗಿರಬಹುದು. ಹಾಗಂತ ಸೋತಿದೆ ಎಂದು ಹೇಳಬೇಡಿ. ಅದು ಮತ್ತೆ ಎದ್ದೇಳುತ್ತದೆ ಎಂದೂ ಮಾತನಾಡಿದ್ದರು. ಈ ಮಾತಿಗೂ ಕೂಡ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ ಅನ್ನು ಗೆಲ್ಲಿಸುವ ಸಿನಿಮಾ ಮಾಡಿ ಎಂದು ಸಲಹೆ ಕೂಡ ಹಲವರು ನೀಡಿದ್ದಾರೆ.
ರಣ್ವೀರ್ ಸಿಂಗ್ ಸಿನಿಮಾಗೆ ದೀಪಿಕಾ ಪಡುಕೋಣೆ ಮುಳುವಾದರಾ ಎನ್ನುವ ಚರ್ಚೆ ಕೂಡ ನಡೆದಿದೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿ, ಹಾಡಿಗೆ ಡಾನ್ಸ್ ಮಾಡಿದ್ದರು. ಹಾಗಾಗಿ ಬೈಕಾಟ್ ಪಠಾಣ್ ಅಭಿಯಾನ ಶುರುವಾಗಿದೆ. ದೀಪಿಕಾ ನಟನೆಯ ಸಿನಿಮಾ ನೋಡಬೇಡಿ ಎಂದು ಹಲವರು ಬರೆದುಕೊಂಡಿದ್ದರು. ಈ ಬಿಸಿ ಏನಾದರೂ ದೀಪಿಕಾ ಪತಿಗೂ ತಟ್ಟಿದೆಯಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.