ರಣಜಿ ಸೆಮಿಫೈನಲ್‍ನಲ್ಲಿ ಕರ್ನಾಟಕಕ್ಕೆ ವೀರೋಚಿತ ಸೋಲು- ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿದರ್ಭ

Public TV
4 Min Read
vinay kumar

ಕೋಲ್ಕತ್ತಾ: ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಸೋಲರಿಯದ ಸರದಾರನಂತೆ ಮುನ್ನುಗ್ಗುತ್ತಿದ್ದ ಕರ್ನಾಟಕ, ಸೆಮಿ ಫೈನಲ್‍ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿ ಫೈನಲ್ ಫೈಟ್‍ನಿಂದ ಹೊರ ನಡೆದಿದೆ.

ರೋಚಕ ಹೋರಾಟಕ್ಕೆ ಸಾಕ್ಷಿಯಾದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ತಂಡವನ್ನು ಮಣಿಸಿದ ವಿದರ್ಭ ತಂಡ ಮೊದಲ ಬಾರಿಗೆ ರಣಜಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಗೆಲುವಿಗಾಗಿ 198 ರನ್‍ಗಳ ಗುರಿ ಪಡೆದಿದ್ದ ಕರ್ನಾಟಕ ಅಂತಿಮ ದಿನದಾಟದಲ್ಲಿ 59.1 ಓವರ್‍ಗಳಲ್ಲಿ 192 ರನ್‍ಗಳಿಗೆ ಆಲೌಟ್ ಆಗುವ ಮೂಲಕ 5 ರನ್‍ಗಳ ಅಂತರದಲ್ಲಿ ಫೈನಲ್ ಆಸೆಯನ್ನು ಕೈ ಬಿಟ್ಟಿತು.

ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಪಂದ್ಯ ಜಯಿಸಲು ಮೂರು ವಿಕೆಟ್‍ಗಳ ನೆರವಿನಿಂದ 87 ರನ್‍ಗಳಿಸುವ ಸವಾಲಿನ ಗುರಿ ಹೊಂದಿತ್ತು. 19 ರನ್‍ಗಳಿಸಿ ನಾಯಕ ವಿನಯ್ ಕುಮಾರ್ ಹಾಗೂ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಮುಂದುವರಿಸಿದ್ದರು. ಜವಾಬ್ದಾರಿಯುತ ಆಟವಾಡುತ್ತಿದ್ದ ವಿನಯ್ ಕುಮಾರ್ 36 ರನ್‍ಗಳಿಸಿದ್ದ ವೇಳೆ, ಗುರ್ಬಾನಿ ಬೌಲಿಂಗ್‍ನಲ್ಲಿ ಕೀಪರ್ ವಾಡ್ಕರ್‍ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ಕರ್ನಾಟಕದ ಗೆಲುವಿಗೆ ಇನ್ನೂ 57 ರನ್‍ಗಳ ಅವಶ್ಯಕತೆ ಇತ್ತು.

RANAJI

ಬಳಿಕ ಶ್ರೇಯಸ್ ಜೊತೆಗೂಡಿದ ಅಭಿಮನ್ಯು ಮಿಥುನ್ ಎಚ್ಚರಿಕೆಯ ಅಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು. 8ನೇ ವಿಕೆಟ್‍ಗೆ 48 ರನ್‍ಗಳ ಅತ್ಯಮೂಲ್ಯ ಜೊತೆಯಾಟವಾಡಿದ ಈ ಜೋಡಿ ಕ್ರೀಸ್‍ನಲ್ಲಿರುವಷ್ಟು ಹೊತ್ತು ಕರ್ನಾಟಕದ ಫೈನಲ್ ಆಸೆ ಜೀವಂತವಾಗಿತ್ತು. ಆದರೆ ಪಟ್ಟು ಬಿಡದ ವಿದರ್ಭ ತಂಡ, ಕೊನೆಯ ಕ್ಷಣದಲ್ಲಿ ಬೌಲಿಂಗ್‍ನಲ್ಲಿ ಮತ್ತೆ ಮೋಡಿ ಮಾಡಿತು. 5 ಬೌಂಡರಿಗಳ ನೆರವಿನಿಂದ 33 ರನ್‍ಗಳಿಸಿ ಆಡುತ್ತಿದ್ದ ಅಭಿಮನ್ಯು ಮಿಥುನ್‍ರನ್ನು ತಮ್ಮ ಮೀಡಿಯಂ ವೇಗದ ಬಲೆಗೆ ಬೀಳಿಸಿದ ಗುರ್ಬಾನಿ ಪಂದ್ಯವನ್ನು ಮತ್ತಷ್ಟು ರೋಚಕ ಘಟ್ಟಕ್ಕೆ ಕೊಂಡೊಯ್ದರು. 9ನೆ ವಿಕೆಟ್ ಪತನವಾದ ವೇಳೆ ಕನಾಟಕದ ಗೆಲುವಿಗೆ 9ರನ್ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ವಿದರ್ಭ ಗೆಲುವಿಗೆ ಒಂದೇ ಒಂದು ವಿಕೆಟ್ ಬಾಕಿ ಇತ್ತು.

ರೋಚಕ ಕೊನೆಯ ಓವರ್: ಕರ್ನಾಟಕ ಪರ ಕೊನೆಯ ಬ್ಯಾಟ್ಸ್ ಮನ್ ಆಗಿ ಕ್ರೀಸಿಗಿಳಿದ ಎಸ್. ಅರವಿಂದ್. ಅದರೆ ಅದೇ ವಿದರ್ಭ ಪಾಲಿಗೆ ಸ್ಟ್ರಾಂಗೆಸ್ಟ್ ಹೋಪ್ ಆಗಿತ್ತು. ಉಮೇಶ್ ಯಾದವ್ ಬೌಲಿಂಗ್‍ನ್ನು ಹಾಗೋ ಹೀಗೋ ಎದುರಿಸಿದ ಅರವಿಂದ್ ಕೊನೆಯ ಎಸೆತದಲ್ಲಿ ಒಂಟಿ ರನ್‍ಗಾಗಿ ಓಡಿದರು. ಹಿಂದೂ ಮುಂದು ನೋಡದೆ ಮತ್ತೊಂದು ಬದಿಯಲ್ಲಿದ್ದ ಸೆಟ್ ಬ್ಯಾಟ್ಸ್ ಮನ್ ಶ್ರೇಯಸ್ ಕೂಡ ಸಿಂಗಲ್‍ಗಾಗಿ ಓಡಿದರು. ಆದರೇ ಇದೇ ಕರ್ನಾಟಕದ ಪಾಲಿಗೆ ಮುಳುವಾಯಿತು. ಮುಂದಿನ ಓವರ್ ಎಸೆಯಲು ಬಂದ ಗುರ್ಬಾನಿ ಮೊದಲ ಎಸೆತದಲ್ಲೇ ಅರವಿಂದ್ ವಿಕೆಟ್ ಪಡೆದು ವಿದರ್ಭ ತಂಡವನ್ನು ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವಂತೆ ಮಾಡಿದರು.

ಎರಡನೇ ಇನ್ನಿಂಗ್ಸ್ ನಲ್ಲಿ 198 ರನ್‍ಗಳ ಗೆಲುವಿನ ಗುರಿ ಪಡೆದಿದ್ದ ಕರ್ನಾಟಕಕ್ಕೆ ಮಾರಕವಾಗಿ ಎರಗಿದ್ದು, ವಿದರ್ಭ ಬೌಲರ್ ರಜನೀಶ್ ಗುರ್ಬಾನಿ. 23.1 ಓವರ್‍ಗಳ ಜೀವನ ಶ್ರೇಷ್ಟ ಬೌಲಿಂಗ್ ದಾಳಿಯಲ್ಲಿ 68 ರನ್ ನೀಡಿ 7 ವಿಕೆಟ್ ಪಡೆದು ವಿದರ್ಭ ಪಾಲಿಗೆ ಹೀರೋ ಆಗಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮತ್ತೊಂದೆಡೆ ರೋಚಕ ಹೋರಾಟ ನಡೆಸಿಯೂ ಕೇವಲ 5 ರನ್‍ಗಳಿಂದ ಪಂದ್ಯ ಸೋತ 8 ಬಾರಿಯ ಚಾಂಪಿಯನ್ ಕರ್ನಾಟಕ, 5 ವರ್ಷದಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಸಾಧನೆಯಿಂದ ಸ್ವಲ್ಪದರಲ್ಲಿಯೇ ವಂಚಿತವಾಯಿತು.

ranaji 5

ಮಹಾರಾಷ್ಟ್ರದ ಅಂಪೈರ್‍ ಗಳೇಕೆ?
ಬಿಸಿಸಿಐ ನಿಯಮಗಳ ಪ್ರಕಾರ ದೇಶೀಯ ಕ್ರಿಕೆಟ್‍ನಲ್ಲಿ ಆಡುವ ಎರಡು ತಂಡಗಳ ಕ್ರಿಕೆಟ್ ಸಂಸ್ಥೆಗಳಿಗೆ ಸಂಬಂಧಪಟ್ಟ ಅಂಪೈರ್‍ಗಳು ಇರಬಾರದು ಎಂಬ ನಿಯಮವಿದೆ. ಆದರೆ ವಿದರ್ಭ ಮತ್ತು ಕರ್ನಾಟಕ ತಂಡಗಳ ರಣಜಿ ಸೆಮಿಫೈನಲ್‍ನ ಅಂಪೈರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪಶ್ಚಿಮ್ ಪಾಠಕ್ ಮತ್ತು ವಿನೀತ್ ಕುಲಕರ್ಣಿ ಇಬ್ಬರೂ ಮಹಾರಾಷ್ಟ್ರದವರು.

ಇಬ್ಬರೂ ಅಂಪೈರ್ ಗಳು ವಿದರ್ಭ ಕ್ರಿಕೆಟ್ ಸಂಸ್ಥೆಗೆ ಸಂಬಂಧಪಟ್ಟಿಲ್ಲವಾದರು ಪಾಠಕ್ ಮುಂಬೈ ಹಾಗೂ ಕುಲಕರ್ಣಿ ಪುಣೆ ಮೂಲದವರು. ಇದರ ಪ್ರಕಾರ ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದ ವಿದರ್ಭ ಕ್ರಿಕೆಟ್ ಸಂಸ್ಥೆಯ ಪಂದ್ಯದಲ್ಲಿ ಮಹಾರಾಷ್ಟ್ರದ ಅಂಪೈರ್‍ಗಳು ಕಾರ್ಯ ನಿರ್ವಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಈ ಹಿಂದೆ ನಾಗ್ಪುರದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ (ವಿದರ್ಭ) ಅಂಪೈರ್‍ಗಳಾದ ಅಭಿಜಿತ್ ದೇಶಮುಖ್ ಮತ್ತು ನಿತಿನ್ ಪಂಡಿತ್ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಕರ್ನಾಟಕ, ಮುಂಬೈ ತಂಡದ ವಿರುದ್ಧ ಇನ್ನಿಂಗ್ಸ್ ಮತ್ತು 20 ರನ್ ಗೆಲುವು ಪಡೆದಿತ್ತು.

RANAJI 1

ವಿವಾದ ಎದ್ದಿದ್ದು ಯಾಕೆ?
ವಿದರ್ಭ ತಂಡದ ಗುರಿ ಬೆನ್ನಟ್ಟಿದ ಕರ್ನಾಟಕದ ಪ್ರಮುಖ ಇಬ್ಬರು ಆಟಗಾರರು ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು ಕರ್ನಾಟಕಕ್ಕೆ ಮಾರಕವಾಯಿತು. ಬ್ಯಾಟಿಂಗ್ ಮುಂದುವರೆಸಿದ ಬಲಗೈ ಬ್ಯಾಟ್ಸ್ ಮನ್ ಸಮರ್ಥ್, ವಿದರ್ಭ ಬಲಗೈ ಮಧ್ಯಮ ವೇಗಿ ಸಿದ್ದೇಶ್ ನೇರಲ್ ಎಸೆತವನ್ನು ರಕ್ಷಣಾತ್ಮಕವಾಗಿ ಎದುರಿಸಿದ್ದರು. ಈ ವೇಳೆ ನೇರಲ್ ಎಸೆದ ಬಾಲ್ ಬ್ಯಾಟ್‍ನ ಒಳ ಅಂಚಿಗೆ ಬಡಿದು ಪ್ಯಾಡ್‍ಗೆ ತಗಿತ್ತು. ಕೂಡಲೇ ವಿದರ್ಭ ಆಟಗಾರರು ಅಂಪೈರ್ ಗೆ ಎಲ್ ಬಿಡಬ್ಲೂ ಗೆ ಮನವಿ ಸಲ್ಲಿಸಿದರು, ಕೂಡಲೇ ಆಟಗಾರರ ಮನವಿ ಸ್ವೀಕರಿಸಿದ ಅಂಪೈರ್ ಪಾಠಕ್ ಔಟ್ ಎಂದು ತೀರ್ಪು ನೀಡಿದರು.

ಪಾಠಕ್ ಅವರ ಕಳಪೆ ಅಂಪೈರಿಂಗ್ ಸಿ.ಎಂ ಗೌತಮ್ ಅವರಿಗೂ ಮುಳುವಾಯಿತು. ಗೌತಮ್ ಬ್ಯಾಟಿಂಗ್ ವೇಳೆ ವಿದರ್ಭ ಬೌಲರ್ ರಜನೀಶ್ ಗುರ್ಬಾನಿ ಎಸೆದ ಬಾಲ್ ಗೌತಮ್ ಅವರ ಎಡಗಾಲಿನ ಪ್ಯಾಡ್ ಗೆ ಸವರಿ ವಿಕೆಟ್ ಕೀಪರ್ ಕೈ ಸೇರಿತು. ಕ್ಷಣ ಮಾತ್ರದಲ್ಲಿ ಅಂಪೈರ್ ಗೌತಮ್ ರನ್ನು ಔಟ್ ಎಂದು ತೀರ್ಪು ನೀಡಿದ್ದರು. ಈಗ ಈ ವಿಚಾರವನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಬರೆದು ಬಿಸಿಸಿಐಯನ್ನು ಪ್ರಶ್ನಿಸುತ್ತಿದ್ದಾರೆ.

RANAJI 2

RANAJI 3

RANAJI 4

Share This Article
Leave a Comment

Leave a Reply

Your email address will not be published. Required fields are marked *