ಜಮ್ಮು-ಕಾಶ್ಮೀರ ವಿರುದ್ಧ ಭರ್ಜರಿ ಬ್ಯಾಟಿಂಗ್- ಸೆಮಿಯತ್ತ ಕರ್ನಾಟಕ?

Public TV
3 Min Read
KARNATAKA VS RAILWAYS a

ಜಮ್ಮು: ಆರ್.ಸಿದ್ದಾರ್ಥ್, ಮನೀಶ್ ಪಾಂಡೆ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಬ್ಯಾಟಿಂಗ್‍ನಿಂದ ಕರ್ನಾಟಕ ತಂಡವು ಸೆಮಿ ಫೈನಲ್ ಪ್ರವೇಶದ ಭರವಸೆಯನ್ನು ಮೂಡಿಸಿದೆ.

ರಣಜಿಯ ಟ್ರೋಫಿ 2019-20ರ ಭಾಗವಾಗಿ ಜಮ್ಮುವಿನ ಗಾಂಧಿ ಮೆಮೊರಿಯಲ್ ಸರ್ಕಾರಿ ಸೈನ್ಸ್ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಉತ್ತಮ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಕರ್ನಾಟಕ ತಂಡವು 69.1 ಓವರಿಗೆ 206 ರನ್ ಗಳಿಸಿ ಸರ್ವಪತನ ಕಂಡಿತ್ತು. ಈ ವೇಳೆ ಕರ್ನಾಟಕದ ಕೆ.ವಿ.ಸಿದ್ದಾರ್ಥ್ 76 ರನ್ (189 ಎಸೆತ, 9 ಬೌಂಡರಿ), ಮನೀಶ್ ಪಾಂಡೆ 37 ರನ್ (26 ಎಸೆತ, 7 ಬೌಂಡರಿ) ಗಳಿಸಿದ್ದರು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಜಮ್ಮು-ಕಾಶ್ಮೀರ ತಂಡವು ಆರಂಭದಲ್ಲೇ ಆಘಾತಕ್ಕೆ ತುತ್ತಾಗಿತ್ತು. ಪ್ರಮುಖ ಬ್ಯಾಟ್ಸ್‌ಮನ್‌ ಸೂರ್ಯಾಂಶ್ ರೈನಾ 12 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಜಮ್ಮು-ಕಾಶ್ಮೀರ 62.4 ಓವರ್‌ಗಳಲ್ಲಿ 192 ಆಲೌಟ್ ಆಯಿತು. ಈ ಮೂಲಕ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 14 ರನ್ ಮುನ್ನಡೆ ಸಾಧಿಸಿತ್ತು.

ಈ ಸಮಯದಲ್ಲಿ ಜಮ್ಮು-ಕಾಶ್ಮೀರದ ಪರ ಶುಭಂ ಖಜುರಿಯಾ 62 ರನ್ (155 ಎಸೆತ, 10 ಬೌಂಡರಿ) ಹಾಗೂ ಅಬ್ದುಲ್ ಸಾಮದ್ 43 ರನ್ (50 ಎಸೆತ, 6 ಬೌಂಡರಿ, 1 ಸಿಕ್ಸ್) ಗಳಿಸಿದ್ದರು. ಕರ್ನಾಟಕದ ಪರ ಪ್ರಸಿದ್ಧ ಕೃಷ್ಣ 4 ವಿಕೆಟ್ ಪಡೆದು ಮಿಂಚಿದರೆ, ರೋನಿತ್ ಮೊರೆ ಹಾಗೂ ಸುಚಿತ್ ಜಿ ತಲಾ ಎರಡು ವಿಕೆಟ್ ಕಿತ್ತಿದ್ದರು. ಉಳಿದಂತೆ ಗೌತಮ್ ಕೆ ಒಂದು ವಿಕೆಟ್ ಪಡೆದರೆ, ಅಭಿಮನ್ಯು ಮಿಥುನ್ ಯಾವುದೇ ವಿಕೆಟ್ ಪಡೆಯದಿದ್ದರೂ ಕನಿಷ್ಠ 25 ರನ್ ನೀಡಿದ್ದರು.

ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಉತ್ತಮ ಆರಂಭ ನೀಡಿತು. ಆರ್.ಸಮರ್ಥ್ ಹಾಗೂ ದೇವದತ್ತ ಪಡಿಕ್ಕಲ್ ಜೋಡಿಯು ಮೊದಲ ವಿಕೆಟ್‍ಗೆ 53 ರನ್‍ಗಳ ಕೊಡುಗೆ ನೀಡಿತು. ದೇವದತ್ತ 34 ರನ್ (33 ಎಸೆತ, 8 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿ ನಾಯಕ ಕರುಣ್ ನಾಯರ್ 15 ರನ್ (33 ಎಸೆತ, 2 ಬೌಂಡರಿ) ದಾಖಲಿಸಿ ವಿಕೆಟ್ ಕಳೆದುಕೊಂಡರು. ಈ ಬೆನ್ನಲ್ಲೇ ಮೈದಾಕ್ಕಿಳಿದ ಸಿದ್ದಾರ್ಥ್ ಆರಂಭಿಕ ಬ್ಯಾಟ್ಸ್‌ಮನ್ ಸಮರ್ಥ್ ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯು ಮೂರನೇ ವಿಕೆಟ್‍ಗೆ 98 ರನ್ ಕೊಡುಗೆ ನೀಡಿತು. ಸಮರ್ಥ್ 74 ರನ್ (133 ಎಸೆತ, 7 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು.

Karnataka Team C

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ 35 ರನ್ (35 ಎಸೆತ, 5 ಬೌಂಡರಿ, 1 ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿದರು. 4ನೇ ದಿನದ ಮುಕ್ತಾಯದ ವೇಳೆಗೆ ಕರ್ನಾಟಕ ತಣಡವು 4 ವಿಕೆಟ್ ನಷ್ಟಕ್ಕೆ 245 ರನ್ ಪೇರಿಸಿದೆ. ಸಿದ್ದಾರ್ಥ್ 75 ರನ್ (136 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಎಸ್.ಶರತ್ 9 ರನ್ (33 ಎಸೆತ) ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಕರ್ನಾಟಕ ಈಗ 259 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಮೊದಲ ಎರಡು ದಿನ ಆಟ ನಡೆಯದ ಕಾರಣ ಮತ್ತೆ ಮೂರು ದಿನ ಪಂದ್ಯ ನಡೆಯದೇ ಇದ್ದಲ್ಲಿ ಲೀಗ್ ಪಂದ್ಯ ಅಂಕದ ಆಧಾರದಲ್ಲಿ ಜಮ್ಮು ಕಾಶ್ಮೀರ ಸೆಮಿಫೈನಲ್ ಸುಲಭವಾಗಿ ಪ್ರವೇಶಿಸುತಿತ್ತು. ಆದರೆ ಈಗ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 14 ರನ್ ಗಳ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಸೆಮಿ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಜಮ್ಮು ಕಾಶ್ಮೀರ ಸೆಮಿ ಪ್ರವೇಶಿಸಬೇಕಾದರೆ ಸೋಮವಾರ ಕರ್ನಾಟಕವನ್ನು ಬೇಗನೇ ಆಲ್ ಔಟ್ ಮಾಡಿ ಚೇಸಿಂಗ್ ಮಾಡಿ ಜಯಗಳಿಸುವ ಅನಿವಾರ್ಯತೆ ಎದುರಾಗಿದೆ.

karnataka crick23

Share This Article
Leave a Comment

Leave a Reply

Your email address will not be published. Required fields are marked *