ದೆಹಲಿ: ನಾಕೌಟ್ ಹಂತಕ್ಕೆ ತಲುಪಬೇಕಾದರೆ ಗೆಲುವು ಅನಿವಾರ್ಯ ಆಗಿದ್ದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬ್ಯಾಟಿಂಗ್ ಪಡೆ ಮುಗ್ಗರಿಸಿದೆ. ಇದರ ಹೊರತಾಗಿಯೂ ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಪಡೆದು ಸಮಾಧಾನಗೊಂಡಿದೆ.
ಮಂದ ಬೆಳಕಿನ ಕಾರಣ ಎರಡು ದಿನ ಪೂರ್ಣ ಓವರ್ ಮಾಡಲು ಸಾಧ್ಯವಾಗಿರಲಿಲ್ಲ. ನೇ ದಿನವಾದ ಬುಧವಾರವೂಪೂರ್ಣ ಓವರ್ ಮಾಡಲು ಸಾಧ್ಯವಾಗಲಿಲ್ಲ. ಎರಡನೇ ದಿನದಾಟಕ್ಕೆ 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿದ್ದ ರೈಲ್ವೇಸ್ ತಂಡ ಇವತ್ತು 22 ರನ್ ಸೇರಿಸಿ ಆಲೌಟ್ ಆಯ್ತು. ಕರ್ನಾಟಕ ಪರ ಪ್ರತೀಕ್ ಜೈನ್ 5 ವಿಕೆಟ್ ಅಭಿಮನ್ಯು ಮಿಥುನ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
Advertisement
Advertisement
ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಆರಂಭಿಕ ಅಘಾತ ಉಂಟಾಯ್ತು. ಆರ್.ಸಮರ್ಥ ಶೂನ್ಯಕ್ಕೆ ಔಟಾಗಿ ತಂಡವನ್ನ ಸಂಕಷ್ಟಕ್ಕೆ ತಳ್ಳಿದರು. ಆದರೆ ಭರವಸೆಯ ಆಟಗಾರ ದೇವದತ್ತ ಪಡಿಕ್ಕಲ್, ಎಸ್.ಶರತ್ ಹಾಗೂ ಕೆ.ಗೌತಮ್ ಆಟದಿಂದ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಪಡೆಯಿತು. ಪಡಿಕ್ಕಲ್ 55 ರನ್ (75 ಎಸೆತ, 9 ಬೌಂಡರಿ) , ಶರತ್ ಔಟಾಗದೆ 56 ರನ್ (164 ಎಸೆತ, 5 ಬೌಂಡರಿ), ಕೆ.ಗೌತಮ್ 41 ರನ್ (31 ಎಸೆತ, 2 ಬೌಂಡರಿ, 2 ಸಿಕ್ಸರ್) ಗಳಿಸಿ ಕರ್ನಾಟಕಕ್ಕೆ ಆಸರೆಯಾದರು. ರೈಲ್ವೇಸ್ ಪರ ಅಮಿತ್ ಮಿಶ್ರಾ 5 ವಿಕೆಟ್ ಪಡೆದರೆ, ಎಚ್.ಸಂಗ್ವಾನ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
Advertisement
3ನೇ ದಿನದ ಅಂತ್ಯಕ್ಕೆ ಕರ್ನಾಟಕ ತಂಡ 9 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿ, ಕೇವಲ 17 ರನ್ ಮಾತ್ರ ಮುನ್ನಡೆ ಪಡೆದಿದೆ. ಇನ್ನೊಂದು ದಿನ ಆಟ ಬಾಕಿ ಇದ್ದು, ಪಂದ್ಯ ಡ್ರಾ ಆಗೋದು ನಿಶ್ಚಿತವಾಗಿದೆ. ಒಂದು ವೇಳೆ ಕರ್ನಾಟಕ ಗೆಲ್ಲಬೇಕಾದರೆ ಪವಾಡವೇ ನಡೆಯಬೇಕು. ಒಂದು ವೇಳೆ ಪಂದ್ಯ ಡ್ರಾ ಆದ್ರೆ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ 3 ಅಂಕ ಪಡೆಯಲಿದೆ. ಆದರೆ ನಾಕೌಟ್ ದಾರಿ ಮಾತ್ರ ದುರ್ಗಮವಾಗಲಿದೆ.
Advertisement
ಸ್ಕೋರ್ ವಿವರ:
ರೈಲ್ವೇಸ್ ಮೊದಲ ಇನ್ನಿಂಗ್ಸ್ 182 ಆಲೌಟ್
ಕರ್ನಾಟಕ ಮೊದಲ ಇನ್ನಿಂಗ್ಸ್ 199/9