ಚಿಕ್ಕಮಗಳೂರು: ಹದಿನೈದನೇ ಶತಮಾನದಲ್ಲಿ ಬಗ್ಗುಂಜಿಯಿಂದ ಮೇಗೂರಿನವರೆಗೆ ಆಳಿದ ರಾಣಿ ಕಾಳಲಾದೇವಿ ತನ್ನ ಮಗಳು ಅಕಾಲಿಕ ಮರಣಕ್ಕೆ ತುತ್ತಾದಾಗ, ಮಗಳ ಆತ್ಮಕ್ಕೆ ಶಾಂತಿ ಕೋರಿ ನಿರ್ಮಿಸಿದ್ದ ಕೆರೆ ಇಂದು ಅಳಿವಿನಂಚಿನಲ್ಲಿದ್ದು, ಪಾಳು ಬಿದ್ದಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಾಡಿ ಗ್ರಾಮದ ಕಲ್ಬಸ್ತಿಯಲ್ಲಿ ಹನ್ನೆರಡು ಹೆಕ್ಟೇರ್ ಜಮೀನಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಈ ಕೆರೆ, ತನ್ನದೆಯಾದ ಪ್ರಾಚೀನ ಇತಿಹಾಸ ಹೊಂದಿದೆ. ಆದರೆ ಇದೀಗ ಸಂಪೂರ್ಣ ಕಸದ ಗಿಡಗಳಿಂದ ಆವೃತವಾಗಿದ್ದು, ಪಾಳು ಬಿದ್ದಿದೆ.
Advertisement
Advertisement
ಕ್ರಿ.ಶ.1530ರಲ್ಲಿ ಕಲ್ಬಸ್ತಿಯ ಪಾಶ್ರ್ವನಾಥನಿಗೆ ಜಮೀನು ದತ್ತಿ ನೀಡುವ ರಾಣಿ ಕಾಳಲಾದೇವಿ, 39 ಸಾಲುಗಳ ಶಿಲಾಶಾಸನವನ್ನು ಕೆತ್ತಿಸುತ್ತಾಳೆ. ಆಗ ರಾಣಿ ಕಾಳಲಾದೇವಿ ಈ ಕಲ್ಬಸ್ತಿ ಕೆರೆಯನ್ನು ದುರಸ್ತಿ ಮಾಡಿಸಿ, ದಂಡೆ ನಿರ್ಮಿಸಿ, ಈ ಕೆರೆ ನೀರನ್ನು ಉಪಯೋಗಿಸುವ ಗದ್ದೆಗಳನ್ನು ಪಾಶ್ರ್ವನಾಥ ಸ್ವಾಮಿಯ ಪೂಜೆಗೆ ದಾನವಾಗಿ ನೀಡುತ್ತಾಳೆ. ಇಂತಹ ವಿಶಿಷ್ಟತೆ ಹೊಂದಿರುವ, ಸಾಕಷ್ಟು ದೊಡ್ಡದಾಗಿರುವ ಈ ಕೆರೆ ಇಂದು ಅಳಿವಿನಂಚಿನಲ್ಲಿದ್ದು, ಗಿಡಗಳೆಲ್ಲ ಬೆಳೆದು, ಹೂಳು ತುಂಬಿ ಮುಚ್ಚಿ ಹೋಗುವ ಹಂತ ತಲುಪಿದೆ.
Advertisement
ಕೆರೆಯ ಸ್ಥಿತಿಯನ್ನು ಗಮನಿಸಿ ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಡಿ 2010ರಲ್ಲಿ ಗ್ರಾಮಸ್ಥರ ಸಹಕಾರದಿಂದ ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು. ಆದರೆ ಕೆರೆಯ ಹೂಳೆತ್ತುವ ಅಸಮರ್ಪಕ ವ್ಯವಸ್ಥೆಯಿಂದ ದುರಸ್ತಿಯಾದ ಕೆಲವೇ ವರ್ಷಗಳಲ್ಲಿ ಕೆರೆ ಮತ್ತೆ ಮೊದಲಿನ ಸ್ಥಿತಿಗೆ ಬಂದು ನಿಂತಿದೆ.
Advertisement
ಕೆರೆಯ ಸುತ್ತಲೂ ಕಾಡು ಬೆಳೆದಿದೆ. ಕೆರೆಯ ಒಳಗೆ ಹೂಳು ತುಂಬಿ, ಹುಲ್ಲು ಬೆಳೆದು ಸಂಪೂರ್ಣ ಮುಚ್ಚಿ ಹೋಗುವಂತಾಗಿದೆ. ಅಲ್ಲದೆ ಕೆರೆಯಲ್ಲಿ ಮೊದಲಿನಂತೆ ನೀರು ನಿಲ್ಲುವ ಸಾಮಥ್ರ್ಯವೂ ಇಲ್ಲವಾಗಿದೆ. ವರ್ಷದಿಂದ ವರ್ಷಕ್ಕೆ ಅಧೋಗತಿ ತಲುಪಿ, ವಿನಾಶದತ್ತ ಸಾಗುತ್ತಿರುವ ಐತಿಹಾಸಿಕ ಕೆರೆಯನ್ನು ಉಳಿಸಬೇಕಿದೆ. ಈ ಕೆರೆಗೆ ನೀರು ತುಂಬಿಸಿದಲ್ಲಿ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳ ಬಾವಿಗಳಿಗೆ ಅಂತರ್ಜಲ ಲಭಿಸುತ್ತಿದೆ. ಈ ಮೂಲಕ ಕೆರೆಯನ್ನೇ ನಂಬಿ ಬದುಕುತ್ತಿರುವ ಹತ್ತಾರು ಕುಟುಂಬಗಳ ಬದುಕೂ ಅತಂತ್ರವಾಗುವುದು ತಪ್ಪುತ್ತದೆ. ಕೆರೆಯ ಹೂಳನ್ನು ವೈಜ್ಞಾನಿಕವಾಗಿ ತೆಗೆದು ದುರಸ್ತಿ ಮಾಡಿಸಿ ಪುನರ್ಜನ್ಮ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.