ಗುಲ್ಟು ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ (Janardhan Chikkanna) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ (Hemanth Rao) ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಅಜ್ಞಾತವಾಸಿ’ (Ajnathavasi) ಸಿನಿಮಾದ ಟೀಸರ್ (Teaser) ಇದೇ ಏಪ್ರಿಲ್ 7ರಂದು ರಿಲೀಸ್ ಆಗಲಿದೆ. ಜನಾರ್ದನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹೇಮಂತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ.
ಈ ಸಿನಿಮಾದಲ್ಲಿ ರಂಗಾಯಣ ರಘು (Rangayana Raghu) ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ರಂಗಾಯಣ ರಘು ಅವರೊಂದಿಗೆ ನಟಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ತಾರಾಗಣದಲ್ಲಿ ಇದ್ದಾರೆ. ರಂಗಾಯಣ ರಘು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರೆ, ಸಿದ್ದು ಮೂಲಿಮನಿ ಹಾಗೂ ಪಾವನ ಗೌಡ ಅವರ ಪಾತ್ರವೂ ವಿಶೇಷವಾಗಿದೆಯಂತೆ. ಇದನ್ನೂ ಓದಿ:‘ವೀರಂ’ ಮೂಲಕ ವಿಷ್ಣುವರ್ಧನ್ ಅಭಿಮಾನಿಯಾದ ಪ್ರಜ್ವಲ್ ದೇವರಾಜ್
ಈ ಕುರಿತು ಮಾತನಾಡಿದ ಜನಾರ್ದನ್ ಚಿಕ್ಕಣ್ಣ, ‘ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು. ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ’ ಎನ್ನುತ್ತಾರೆ.