Connect with us

Cricket

ರಾಂಚಿಯಲ್ಲಿ ಟೀಂ ಇಂಡಿಯಾ ಆಟಗಾರರೊಂದಿಗೆ ಧೋನಿ

Published

on

ರಾಂಚಿ: ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಇಂದು ತವರಿನ ಕ್ರೀಡಾಂಗಣ ರಾಂಚಿಯಲ್ಲಿ ಟೀಂ ಇಂಡಿಯಾ ಆಟಗಾರರನ್ನು ಭೇಟಿ ಮಾಡಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ ನಂ.1 ಪಟ್ಟದಲ್ಲೇ ಮುಂದುವರಿಯಿತು. ಪಂದ್ಯದ ಬಳಿಕ ಧೋನಿ ಅವರು ಟೀಂ ಇಂಡಿಯಾ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡರು.

ಜಾರ್ಖಂಡ್‍ನ ಯುವ ಆಟಗಾರ ನದೀಮ್ ಅವರು ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು. ಅಲ್ಲದೇ ಬೌಲಿಂಗ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು. ಧೋನಿ ತಮ್ಮ ಭೇಟಿ ವೇಳೆ ನದೀಮ್ ಅವರೊಂದಿಗೆ ಚರ್ಚೆ ಮಾಡುತ್ತಿರುವ ಫೋಟೋವನ್ನು ಬಿಸಿಸಿಐ ಹಂಚಿಕೊಂಡಿದೆ. ದಿನದಾಟ ಆರಂಭವಾದ 10 ನಿಮಿಷಗಳಲ್ಲೇ ಉಳಿದ 2 ವಿಕೆಟ್ ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವು ಪಡೆಯಿತು. ವಿಶೇಷ ಎಂದರೇ ಈ ಎರಡು ವಿಕೆಟ್‍ಗಳನ್ನು ನದೀಮ್ ಪಡೆದು ಮಿಂಚಿದ್ದರು.

ಬಿಸಿಸಿಐ ಮಾತ್ರವಲ್ಲದೇ ಕೋಚ್ ರವಿಶಾಸ್ತ್ರಿ ಅವರು ಕೂಡ ಧೋನಿ ಅವರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದು, ಸರಣಿ ಜಯದ ಬಳಿಕ ಭಾರತದ ದಿಗ್ಗಜ ಆಟಗಾರನನ್ನು ತನ್ನ ತವರಿನಲ್ಲಿ ಭೇಟಿ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಧೋನಿ ಆಟಗಾರರ ಕೊಠಡಿಯಲ್ಲಿ ಇದ್ದಾರೆ. ಬಂದು ಅವರಿಗೆ ಹಾಯ್ ಹೇಳಿ ಎಂದು ನಗೆ ಬೀರಿದರು.

2014 ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದ ಧೋನಿ, 2019ರ ವಿಶ್ವಕಪ್ ಬಳಿಕ ಕ್ರಿಕೆಟ್‍ನಿಂದ ವಿರಾಮವನ್ನು ಪಡೆದಿದ್ದಾರೆ. ರಾಂಚಿ ಟೆಸ್ಟ್ ಆರಂಭ ದಿನವೇ ಧೋನಿ ಆಟಗಾರರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಪಂದ್ಯದ ಮುಕ್ತಾಯದ ಬಳಿಕ ಧೋನಿ ಆಟಗಾರರನ್ನು ಭೇಟಿ ಮಾಡಿ ಸಮಯ ಕಳೆದಿದ್ದಾರೆ.

Click to comment

Leave a Reply

Your email address will not be published. Required fields are marked *