ಕೊಡಲಿಯಿಂದ ಹೊಡೆದು ಪತ್ನಿ, ಮಗ, ಮಗಳನ್ನ ಕೊಂದ ಪೊಲೀಸ್

Public TV
2 Min Read
Ranchi Murder 3.JPG

-ಪತ್ನಿ ಶವದ ಪಕ್ಕ ಕುಳಿತು ಸೋದರಿಗೆ ಫೋನ್ ಮಾಡ್ದ
-ನಶೆಯ ಮತ್ತಿನಲ್ಲಿ ಮೂವರ ಬರ್ಬರ ಕೊಲೆ
-ಕೊಲೆಯ ಬಳಿಕ ಆತ್ಮಹತ್ಯೆಗೆ ಯತ್ನ

ರಾಂಚಿ: ವ್ಯಕ್ತಿಯೋರ್ವ ನಶೆಯ ಮತ್ತಿನಲ್ಲಿ ಕೊಡಲಿಯಿಂದ ಹೊಡೆದು ಪತ್ನಿ, ಮಗಳು ಮತ್ತು ಮಗನನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಜಾರ್ಖಂಡ್ ರಾಜ್ಯದ ಬಢಗಾಯಿ ಇಲಾಖೆಯ ಚಂದ್ರಗುಪ್ತ ನಗರದಲ್ಲಿ ನಡೆದಿದೆ.

40 ವರ್ಷದ ಬ್ರಿಜೇಶ್ ತಿವಾರಿ ಕುಟುಂಬಸ್ಥರನ್ನು ಕೊಲೆಗೈದ ಪೊಲೀಸ್. ಬ್ರಿಜೇಶ್ ಪತ್ನಿ ರಿಂಕಿ ದೇವಿ (35), ಪುತ್ರಿ ಖುಷ್ಬೂ (15) ಮತ್ತು ಪುತ್ರ ಬಾದಲ್ (10) ಕೊಲೆಯಾದ ಕುಟುಂಬಸ್ಥರು. ಆರೋಪಿ ಬ್ರಿಜೇಶ್ ವಿಶೇಷ ತನಿಖಾದಳ ತಂಡದ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಮೂಲತಃ ಪಲಾಮೂ ಜಿಲ್ಲೆಯನಾದ ಬ್ರಿಜೇಶ್ ಕೆಲಸದ ನಿಮಿತ್ತ ಚಂದ್ರಗುಪ್ತ ನಗರದ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು.

Ranchi Murder 1

ರಾತ್ರಿ ನಡೆದಿದ್ದೇನು?: ಶುಕ್ರವಾರ ರಾತ್ರಿ ಪಾನಮತ್ತನಾಗಿ ಬಂದ ಬ್ರಿಜೇಶ್ ಪತ್ನಿ ಜೊತೆ ಜಗಳ ಮಾಡಿದ್ದಾನೆ. ಕುಡಿದು ಬಂದಿದ್ದರಿಂದ ಪತ್ನಿ ಸಹಜವಾಗಿ ಗಂಡನ ಮೇಲೆ ಕೂಗಾಡಿದ್ದಾರೆ. ಕೋಪಗೊಂಡ ಬ್ರಿಜೇಶ್ ಮನೆಯಲ್ಲಿದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ತಾಯಿಯ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಮಕ್ಕಳಾದ ಖುಷ್ಬೂ ಮತ್ತು ಬಾದಲ್ ಅಮ್ಮನ ರಕ್ಷಣೆಗೆ ಮುಂದಾಗಿದ್ದಾರೆ. ನಶೆಯಲ್ಲಿದ್ದ ಬ್ರಿಜೇಶ್ ಪತ್ನಿ ಜೊತೆ ಮಕ್ಕಳ ಮೇಲೆಯೂ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ.

ಸೋದರಿಗೆ ಪೋನ್ ಮಾಡ್ದ: ಕೊಲೆಯ ಬಳಿಕ ಪತ್ನಿಯ ಶವದ ಪಕ್ಕ ಕುಳಿತು ರಾಂಚಿಯ ಪಂಡಾರದಲ್ಲಿರುವ ಸೋದರಿಗೆ ಬ್ರಿಜೇಶ್ ಫೋನ್ ಮಾಡಿದ್ದಾನೆ. ನಾನು ಮೂವರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ವಿಷಯ ತಿಳಿಸಿದ್ದಾನೆ. ಸೋದರನ ಮಾತು ಕೇಳಿ ಭಯಗೊಂಡ ಸೋದರಿ ನೆರೆಹೊರೆಯವರೊಂದಿಗೆ ರಾತ್ರಿ ಸುಮಾರು 12 ಗಂಟೆಗೆ ಅಣ್ಣನ ಮನೆ ತಲುಪಿದ್ದಾರೆ. ಮನೆಗೆ ಬಂದು ಮೊದಲು ಮನೆಯ ಮಾಲೀಕನನ್ನು ಎಚ್ಚರಿಸಿ, ತನ್ನ ಸೋದರ ಅತ್ತಿಗೆಯೊಂದಿಗೆ ಜಗಳ ಮಾಡ್ತಿದ್ದಾನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಮನೆಯ ಬಾಗಿಲು ತೆಗೆದಾಗ ಬೆಡ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಂಕಿ ದೇವಿ ಮೃತದೇಹ ಕಾಣಿಸಿದೆ. ಶವದ ಪಕ್ಕದಲ್ಲಿಯೇ ಬ್ರಿಜೇಶ್ ಕುಳಿತಿದ್ದಾನೆ. ಬೆಡ್ ಕೆಳಗಡೆ ಮಕ್ಕಳಿಬ್ಬರ ಶವ ಕಾಣಿಸಿವೆ.

Ranchi Murder 2

ಕೊಲೆಯ ವಿಷಯ ಗೊತ್ತಾಗುತ್ತಿದ್ದಂತೆ ಮನೆಯ ಮಾಲೀಕ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇತ್ತ ಸೋದರಿ ಮತ್ತು ನೆರೆಹೊರೆಯವರು ಬರುತ್ತಿದ್ದಂತೆ ಬ್ರಿಜೇಶ್ ಮದ್ಯದ ಬಾಟಲಿ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನನ್ನು ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಾವಿನ ಸುತ್ತ ಅನುಮಾನ: ಆರೋಪಿ ಜಗಳ ವಿಕೋಪಕ್ಕೆ ತಿರುಗಿದಾಗ ಕೊಲೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ಆದ್ರೆ ಮನೆಯ ಮಾಲೀಕರ ಜಗಳ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಇಬ್ಬರ ಮಧ್ಯೆ ಜಗಳ ನಡೆದಿದ್ದರೆ ಹತ್ತಿರದಲ್ಲಿದ್ದ ನಮಗೆ ಗಲಾಟೆ ಕೇಳಿಸಬೇಕಿತ್ತು. ಆ ರೀತಿಯ ಸದ್ದು ನಮಗೆ ಕೇಳಿಸಿಲ್ಲ ಎಂದು ಮನೆಯ ಮಾಲೀಕ ಹೇಳಿಕೆ ನೀಡಿದ್ದಾರೆ. ಆರೋಪಿ ಬ್ರಿಜೇಶ್ ಕೊಲೆಗೂ ಮುನ್ನ ಮತ್ತು ಬರುವ ಔಷಧಿ ನೀಡಿದ ಬಳಿಕ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Police Jeep 1

ಮೃತ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆಯಲ್ಲಿ ಕೊಲೆ ಹೇಗೆ ನಡೆದಿದೆ ಎಂಬುವುದು ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *