ಮುಂಬೈ: ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಣ್‍ಬೀರ್ ಹಾಗೂ ಆಲಿಯಾ ಭಟ್ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿರುವ ಸುದ್ದಿ ಬಿ-ಟೌನ್‍ನಲ್ಲಿ ಕೇಳಿ ಬರುತ್ತಿದೆ. ಆದರೆ ಈ ನಡುವೆ ಈಗ ಇವರ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಆಮಂತ್ರಣ ಪತ್ರಿಕೆಯಲ್ಲಿ ಕಪೂರ್ ಹಾಗೂ ಭಟ್ ಕುಟುಂಬದವರ ಹೆಸರಿದ್ದು, ಜೊತೆಗೆ ಅದರಲ್ಲಿ ಮದುವೆ ಆಗುವ ಸ್ಥಳ ಹಾಗೂ ದಿನಾಂಕ ಕೂಡ ಉಲ್ಲೇಖಿಸಲಾಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಜನವರಿ 22, 2020ರಂದು ಜೋಧಪುರ್ ನ ಉಮೇದ್ ಭವನದಲ್ಲಿ ರಣ್‍ಬೀರ್ ಹಾಗೂ ಆಲಿಯಾ ಮದುವೆಯಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ವೈರಲ್ ಆಗಿರುವ ಆಮಂತ್ರಣ ಪತ್ರಿಕೆ ನೋಡಿ ಅಭಿಮಾನಿಗಳು ನಕಲಿ ಎಂದು ಹೇಳುತ್ತಿದ್ದಾರೆ. ಏಕೆಂದರೆ ಇದರಲ್ಲಿ ಆಲಿಯಾ ಅವರ ತಂದೆ ಹೆಸರು ಮಹೇಶ್ ಭಟ್ ಬದಲು ಮುಕೇಶ್ ಭಟ್ ಎಂದು ಬರೆಯಲಾಗಿದೆ. ಅಲ್ಲದೆ ಆಮಂತ್ರಣ ಪತ್ರಿಕೆಯಲ್ಲಿ ಅಕ್ಷರಗಳು ಸಾಕಷ್ಟು ತಪ್ಪಿರುವ ಕಾರಣ ಇದನ್ನು ಫೇಕ್ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಆಲಿಯಾ ಭಟ್ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಆಲಿಯಾ ನಗುತ್ತಾ, ಈಗ ನಾನು ಏನೂ ಹೇಳಲಿ? ಎಂದು ಉತ್ತರ ನೀಡಿ ಅಲ್ಲಿಂದ ಹೊರಟು ಹೋದರು.
ಈ ಹಿಂದೆ ರಣ್‍ಬೀರ್ ಹಾಗೂ ಆಲಿಯಾ ಮದುವೆ ಆಗಿರುವ ಫೋಟೋವೊಂದು ವೈರಲ್ ಆಗಿತ್ತು. ಮದುವೆ ಜಾಹೀರಾತಿನಲ್ಲಿ ನಟಿಸಿದ ಆಲಿಯಾ ಇರುವ ಫೋಟೋವನ್ನು ರಣ್‍ಬೀರ್ ಅವರನ್ನು ಫೋಟೋಶಾಪ್ ಮಾಡಿ ವೈರಲ್ ಮಾಡಲಾಗಿತ್ತು.