ಸಾಮಾನ್ಯವಾಗಿ ಬಹುತೇಕ ನಟಿಯರು ಗ್ಲಾಮರಸ್ ಪಾತ್ರಗಳಲ್ಲಿ, ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿಯೇ ಮಿಂಚಬೇಕೆಂಬ ಇರಾದೆ ಹೊಂದಿರುತ್ತಾರೆ. ಕೆಲವೇ ಕೆಲ ನಟಿಯರು ಮಾತ್ರವೇ ಅದು ಎಂಥಾದ್ದೇ ಚಹರೆಯ ಪಾತ್ರವಾದರೂ ನಟನೆಗೆ ಅವಕಾಶವಿರಬೇಕು, ಅದು ಸವಾಲಿನದ್ದಾಗಿರಬೇಕೆಂಬ ಮನಸ್ಥಿತಿ ಹೊಂದಿರುತ್ತಾರೆ. ಅಂಥ ವಿರಳ ನಟಿಯರ ಸಾಲಿನಲ್ಲಿ ಐಶ್ವರ್ಯಾ ರಾವ್ ಕೂಡಾ ಸೇರಿಕೊಳ್ಳುತ್ತಾರೆ. ಬಹುಶಃ ತಾನು ಪರಿಪೂರ್ಣ ನಟಿಯಾಗಬೇಕೆಂಬ ತುಡಿತ ಇಲ್ಲದೇ ಹೋಗಿದ್ದರೆ ಖಂಡಿತಾ ಅವರು ರಣಹೇಡಿ ಚಿತ್ರದ ಪಾತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ನಿರ್ದೇಶಕ ಮನು ಕೆ. ಶೆಟ್ಟಿ ಹಳ್ಳಿ ಕಥೆಯನ್ನು ಸಿದ್ಧಪಡಿಸಿಕೊಳ್ಳುವಾಗಲೇ ಪಾತ್ರಗಳಿಗೂ ಕಲಾವಿದರನ್ನು ನಿಕ್ಕಿ ಮಾಡಿಕೊಂಡಿದ್ದರಂತೆ. ಕರ್ಣ ಕುಮಾರ್ ಈ ಕಥೆಯನ್ನು, ಪಾತ್ರವನ್ನು ಆರಂಭಿಕವಾಗಿಯೇ ಒಪ್ಪಿಕೊಂಡಿದ್ದರು. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಕರ್ಣಕುಮಾರ್ ಕೂಡಾ ಅತ್ಯಂತ ಖುಷಿಯಿಂದಲೇ ಈ ಪಾತ್ರವನ್ನು ಒಪ್ಪಿಕೊಂಡಿದ್ದರು. ಆದರೆ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳೋದೆಂಬುದೇ ಪ್ರಶ್ನೆಯಾಗಿತ್ತು. ಅದು ಡಿಗ್ಲಾಮ್ ಪಾತ್ರ. ನಟನೆಯಲ್ಲಿ ಪಾರಂಗತೆಯಾದ ನಟಿ ಮಾತ್ರವೇ ಅದನ್ನು ನಿರ್ವಹಿಸಲು ಸಾಧ್ಯ. ಇದಕ್ಕಾಗಿ ಹುಡುಕಾಟದಲ್ಲಿದ್ದಾಗ ಅದಾಗಲೇ ರವಿ ಹಿಸ್ಟರಿ ಎಂಬ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯಾ ರಾವ್ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದರು.
https://www.facebook.com/publictv/videos/2397787000346983/?t=1
ರವಿ ಹಿಸ್ಟರಿಯ ಜೊತೆಗೇ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದವರು ಐಶ್ವರ್ಯಾ ರಾವ್. ಈ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿ ಥ್ರಿಲ್ ಆದ ಐಶ್ವರ್ಯಾ ಮರು ಮಾತಾಡದೆ ಅದನ್ನು ಒಪ್ಪಿಕೊಂಡಿದ್ದರಂತೆ. ಅವರದ್ದಿಲ್ಲಿ ಬಳ್ಳಾರಿ ಸೀಮೆಯಿಂದ ಕಬ್ಬು ಕಟಾವು ಮಾಡಲು ಮಂಡ್ಯ ಸೀಮೆಗೆ ಬಂದ ಕೂಲಿಯಾಳಿನ ಪಾತ್ರ. ಯಾವುದೇ ಗ್ಲಾಮರ್ ಇಲ್ಲದ ಆ ಪಾತ್ರಕ್ಕೆ ಐಶ್ವರ್ಯಾ ಜೀವ ತುಂಬಿರೋ ರೀತಿಯ ಬಗ್ಗೆ ಚಿತ್ರತಂಡದಲ್ಲೊಂದು ಮೆಚ್ಚುಗೆ ಇದ್ದೇ ಇದೆ. ಐಶ್ವರ್ಯಾರ ನಟನೆ ನೋಡಿದ ಪ್ರತೀ ಪ್ರೇಕ್ಷಕರೂ ಕೂಡ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ ಎಂಬಂಥಾ ಭರವಸೆಯೂ ಚಿತ್ರತಂಡದಲ್ಲಿದೆ. ಈ ಪಾತ್ರ ಸೇರಿದಂತೆ ಒಟ್ಟಾರೆ ಚಿತ್ರದ ಸ್ಪಷ್ಟ ಚಿತ್ರಣ ಈ ವಾರ ಸಿಗಲಿದೆ.